
ಮೇ 13: ಉಡುಪಿ ಜಿಲ್ಲಾಡಳಿತದ ವತಿಯಿಂದ ಮತ ಏಣಿಕೆಗೆ ಸಕಲ ಸಿದ್ದತೆ
ಉಡುಪಿ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಮತ ಎಣಿಕೆ ಪ್ರಕ್ರಿಯೆ ಮೇ 13 ರಂದು ನಡೆಯಲಿದ್ದು, ಜಿಲ್ಲೆಯಲ್ಲಿನ ಒಟ್ಟು 5 ವಿಧಾನಸಭಾ ಕ್ಷೇತ್ರಗಳ ಮತಎಣಿಕೆಯು ಉಡುಪಿಯ ಸೈಂಟ್ ಸಿಸಿಲಿಸ್ ಶಾಲೆಯಲ್ಲಿ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮತಎಣಿಕೆ ಸಂಬಂಧ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು ಸಿ.ಐ..ಎಸ್.ಎಫ್ ತುಕಡಿಯಿಂದ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಭದ್ರತೆ ನೀಡಲಾಗಿದೆ.
ದಿನಾಂಕ 10.05.2023 ರಂದು ನಡೆದ ಮತದಾನದ ಸಂದರ್ಭದಲ್ಲಿ ಮತದಾನವಾದ ಮತಯಂತ್ರಗಳನ್ನು ಸೂಕ್ತ ಭದ್ರತಾ ವ್ಯವಸ್ಥೆಯನ್ನು ಪೊಲೀಸ್ ಅಧೀಕ್ಷಕರ ಉಸ್ತುವಾರಿಯಲ್ಲಿ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಜಿಲ್ಲಾ ಮಟ್ಟದಲ್ಲಿ ಮಾಡಲಾಗಿರುವ ಭದ್ರತಾ ಕೊಠಡಿ ಭದ್ರತಾ ಕೊಠಡಿ ಸ್ಟೆಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆ ಬ್ರಹ್ಮಗಿರಿ ಉಡುಪಿ ಇಲ್ಲಿ ವಿಧಾನಸಭಾ ಕ್ಷೇತ್ರವಾರು ಸುರಕ್ಷತೆಯಿಂದ ಇರಿಸಲಾಗಿದೆ.
ಪ್ರಸ್ತುತ ಈ ಭದ್ರತಾ ಕೊಠಡಿಗೆ 3 ಹಂತದ (Three Tire) ಭದ್ರತೆಯನ್ನು ಒದಗಿಸಲಾಗಿದೆ. ಕೇಂದ್ರ ಮೀಸಲು ಪಡೆ, ರಾಜ್ಯ ಮೀಸಲು ಪಡೆ ಹಾಗೂ ಜಿಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಯಾವುದೇ ಅನಧೀಕೃತ ವ್ಯಕ್ತಿಗಳಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಅಧೀಕೃತವಾಗಿ ಪಾಸ್ ಪಡೆದ ವ್ಯಕ್ತಿಗಳಿಗೆ ಮಾತ್ರ ಮತ ಎಣಿಕೆ ಕೇಂದ್ರ ಪ್ರವೇಶಿಸಲು ಅವಕಾಶವಿರುತ್ತದೆ.
ಚುನಾವಣಾ ಪ್ರಕ್ರಿಯೆಯ ಅಂತಿಮ ಘಟ್ಟ ಮತ ಎಣಿಕ ಕಾರ್ಯವು ದಿನಾಂಕ 13.05.2023 ರಂದು ಪೂರ್ವಾಹ್ನ 8.00 ಗಂಟೆಯಿಂದ ಚುನಾವಣಾ ವೀಕ್ಷಕರುಗಳು, ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಏಜೆಂಟರ ಸಮ್ಮುಖದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ನಡೆಸಲು ಮತ ಎಣಿಕೆಗಾಗಿ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆ ಬ್ರಹ್ಮಗಿರಿ ಉಡುಪಿ ಇಲ್ಲಿ ಮಾಡಲಾಗಿರುತ್ತದೆ.
ಮತ ಎಣಿಕೆಯು ಐದು ಚುನಾವಣಾಧಿಕಾರಿ ಹಾಗೂ 5 ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪ್ರತಿಯೊಂದು ಕೊಠಡಿಗಳಲ್ಲಿ ಜರುಗಲಿದೆ. ಪ್ರತೀ ವಿಧಾನಸಭಾ ಕ್ಷೇತ್ರವಾರು 4 ಟೇಬಲ್ಗಳಂತೆ ಅಂಚೆ ಮತ ಪತ್ರ ಎಣಿಕೆಗೆ ಕ್ರಮವಹಿಸಲಾಗಿದೆ.
ಮತ ಎಣಿಕೆಗಾಗಿ ಒಟ್ಟು 375 ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಎಲ್ಲಾ ಮತ ಎಣಿಕೆ ಅಧಿಕಾರಿ/ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ.
ಮತ ಎಣಿಕೆಯ ದಿನ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಚುನಾವಣಾ ಫಲಿತಾಂಶ ಘೋಷಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗೃತ ಕ್ರಮವಾಗಿ ದಿನಾಂಕ 13.05.2023 ರ ಬೆಳಿಗ್ಗೆ 5.00 ಗಂಟೆಯಿಂದ ದಿನಾಂಕ 13.05.2023 ರ ಮಧ್ಯರಾತ್ರಿ 12.(M) ಗಂಟೆಯವರೆಗೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯಡಿಯಲ್ಲಿ ಕಲಂ 144 ರ ನಿಷೇಧಾಜ್ಞೆ ಹೊರಡಿಸಲಾಗುತ್ತದೆ. ಈ ವೇಳೆ ಯಾವುದೇ ಸಭೆ, ವಿಜಯೋತ್ಸವ ಮೆರವಣಿಗೆ ನಡೆಸುವಂತಿಲ್ಲ.
ಮತ ಎಣಿಕೆಯ ದಿನ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಹಾಗೂ ಸಮಾಜ ವಿದ್ರೋಹಿ ಘಟನೆಗಳು ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ದಿನಾಂಕ 12.05.2023 ರ ಮಧ್ಯರಾತ್ರಿ 12.00 ಗಂಟೆಯಿಂದ ದಿನಾಂಕ 13.05.2023 ರ ಮಧ್ಯರಾತ್ರಿ 12.0 ಗಂಟೆಯವರೆಗೆ ಮದ್ಯ ಸಾಗಾಣೆ ಹಾಗೂ ಮಾರಾಟ ನಿಷೇಧಿಸಿ “ಒಣ ದಿನ”(DRY DAY) ಎಂದು ಘೋಷಿಸಲಾಗಿದೆ.
ಈ ಮೇಲ್ಕಂಡಂತೆ ಮತ ಎಣಿಕಾ ಕಾರ್ಯಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಹಾಗೂ ಸೂಕ್ತ ಭದ್ರತಾ ವ್ಯವಸ್ಥೆಯೊಂದಿಗೆ ಯಾವುದೇ ಲೋಪಗಳಾಗದಂತೆ ಮತ ಎಣಿಕಾ ಕಾರ್ಯವು ಸುಗಮವಾಗಿ ಜರುಗಲು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.