
ಮೇ 6: ಮಲ್ಪೆಯಲ್ಲಿ ರಾಜ್ಯದ ಪ್ರಥಮ ʼಫ್ಲೋಟಿಂಗ್ ಬ್ರಿಡ್ಜ್ʼ ಲೋಕಾರ್ಪಣೆ
ಉಡುಪಿ: ಪ್ರವಾಸೋದ್ಯಮಕ್ಕೆ ಹೆಸರಾದ ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರ ತೀರದಲ್ಲಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು ಮಲ್ಪೆ ಬೀಚ್ ನಲ್ಲಿ ಹೊಸದಾದ ತೇಲುವ ಸೇತುವೆ ಮೇ 6ರಂದು ಲೋಕಾರ್ಪಣೆಗೊಳ್ಳಲಿದೆ.
ಈ ತೇಲುವ ಸೇತುವೆಯು ಒಂದು ರೀತಿಯಲ್ಲಿ ಸಾಹಸ ಕ್ರೀಡೆಯಾಗಿದ್ದು, ಗಟ್ಟಿ ಗುಂಡಿಗೆ ಇರುವ ಯಾರು ಬೇಕಾದರೂ ಆನಂದಿಸಬಹುದು. ಈ ಸೇತುವೆಯ ಮೇಲೆ ನಡೆದು ಹೋಗಬಹುದು. ಇದರಡಿಯಲ್ಲಿ ಬರುವ ಅಲೆಗಳು ಸಣ್ಣದಿರಲಿ, ದೊಡ್ಡದಿರಲಿ, ಈ ಸೇತುವೆಯನ್ನು ಮೇಲಕ್ಕೆತ್ತಿ ಕೆಳಗಿಳಿಸುತ್ತದೆ. ಅಲೆಯ ರಬಸಕ್ಕೆ ಅಲೆಯಂತಯೇ ಮೇಲೇರಿ ಅದೇ ರಭಸದಲ್ಲಿ ಕೆಳಗಿಳಿದು ಬರುವ ಅನುಭವ ವರ್ಣಸಲಸಾಧ್ಯ. ಇದು ಪ್ರವಾಸಿಗರಿಗೆ ಅತ್ಯಂತ ನವನವೀನ ಅನುಭವ ನೀಡುವ ಹಿನ್ನೆಲೆಯಲ್ಲಿ ಇದನ್ನು ನಿರ್ಮಿಲಾಗಿದೆ. ಸೇತುವೆಯು 100 ಮೀಟರ್ ಉದ್ದವನ್ನು ಮತ್ತು 3.5 ಮೀಟರ್ ಅಗಲ ವಿಸ್ತೀರ್ಣವನ್ನು ಹೊಂದಿದೆ. ಸೇತುವೆಯ ಎರಡು ಇಕ್ಕೆಲಗಳಲ್ಲಿ ರೇಲಿಂಗ್ ಸಿಸ್ಟಮ್ ಅಳವಡಿಸಿದ್ದು ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ಬೀಚ್ ನಿರ್ವಹಣಾ ತಂಡದ ಸುದೇಶ್ ಶೆಟ್ಟಿ ನೇತೃತ್ವದಲ್ಲಿ ನಿರ್ಮಿಸಲಾಗಿದೆ.
ಇದರಲ್ಲಿ 10 ಮಂದಿ ಲೈಫ್ ಗಾರ್ಡ್, 30 ಲೈಫ್ ಬ್ಯಾಗ್ಸ್, ಹೊಂದಿದ್ದು, ಪ್ರವಾಸಿಗರು ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿಕೊಂಡು ಸೇತುವೆಯ ಮೇಲೆ ನಡೆಯಬಹುದು. ಇದನ್ನು ಹೈ ಡೆನ್ಸಿಟಿ ಪಾಲಿಎತಿಲೀನ್ (HDPI) ಬ್ಲಾಕ್ಗಳಿಂದ ಮಾಡಲ್ಪಟ್ಟಿದ್ದು, ಅಲೆಯ ಏರಿಳಿತದಿಂದ ಭಯಬೀತರಾದವರು ರೈಲಿಂಗುಗಳ ಆಸರೆ ಪಡೆಯಬಹುದು. ಕೇರಳದ ಬೇಪೂರ್ ಬೀಚ್ ಹೊರತುಪಡಿಸಿದರೆ ಇಂತಹ ಸೌಲಭ್ಯ ಹೊಂದುವ ಕರ್ನಾಟಕದ ಮೊದಲ ಬೀಚ್ ಮಲ್ಪೆಯಾಗಿದೆ ಎಂದು ಬೀಚ್ ನಿರ್ವಹಣಾ ತಂಡದ ಸುದೇಶ್ ಶೆಟ್ಟಿ ಹೇಳಿದ್ದಾರೆ.
ಇದರ ಲೋಕಾರ್ಪಣೆ ಕಾರ್ಯಕ್ರಮ ಶುಕ್ರವಾರ ಸಂಜೆ 5 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಉಡುಪಿ ಶಾಸಕ ರಘುಪತಿ ಭಟ್, ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್ ಭಾಗವಹಿಸಲಿದ್ದು, ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆಯ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕ್ಲಿಫರ್ಡ್ ಲೋಬೊ, ದಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ನಗರಸಭೆಯ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪಾಂಡುರಂಗ ಮಲ್ಪೆ, ಮಲ್ಪೆ ಠಾಣಾಧಿಕಾರಿ ಸಕ್ತೀವೇಲು, ಹಿಂದೂ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಮಂಜು ಕೊಳ ಭಾಗವಹಿಸಲಿದ್ದಾರೆ.