
ಮೈಲಾರಿಯಲ್ಲಿ ದೋಸೆ ಸವಿದ ಪ್ರಿಯಾಂಕ ಗಾಂಧಿ
ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಮೈಸೂರಿಗೆ ಆಗಮಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ನಗರದ ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಅಗ್ರಹಾರದ ಮೈಲಾರಿ ಹೋಟೆಲ್‌ಗೆ ತೆರಳಿ ದೋಸೆ ಸವಿದರು.
ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಚಾರದಲ್ಲಿ ತೊಡಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಬೆಳಗ್ಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧP ಡಿ.ಕೆ.ಶಿವಕುಮಾರ್ ಜತೆ ನಗರದ ಅಗ್ರಹಾರ ವೃತ್ತದ ಬಳಿ ಇರುವ ಮೈಲಾರಿ ಹೋಟೆಲ್‌ಗೆ ತೆರಳಿ, ತಾವೇ ರುಚಿಯಾದ ದೋಸೆ ತಯಾರಿಸಿ ಸವಿದರು. ಮಂಗಳವಾರ ವಿವಿಧೆಡೆ ಚುನಾವಣಾ ಪ್ರಚಾರ ಮುಗಿಸಿ, ನಗರದ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿದ್ದ ಅವರು ವಿಶೇಷ ಭದ್ರತೆಯಲ್ಲಿ ಮೈಲಾರಿ ಹೋಟೆಲ್‌ಗೆ ಬಂದರು. ಕಾರಿನಿಂದ ಕೆಳಗಿಳಿದು, ಸೀದಾ ಅಡುಗೆ ಕೋಣೆಗೆ ತೆರಳಿ, ಕಾವಲಿಗೆ ಹಿಟ್ಟು ಹಾಕಿ ದೋಸೆ ಹೊಯ್ದರು.
ಈ ವೇಳೆ ಬೆಳಗ್ಗಿನ ಉಪಾಹಾರಕ್ಕೆ ಆಗಮಿಸಿದ್ದ ಸಾರ್ವಜನಿಕರು ಪ್ರಿಯಾಂಕಾ ಅವರನ್ನು ಕಂಡು ಸಂತಸ ವ್ಯಕ್ತಪಡಿಸಿ, ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಆದರೆ ಭದ್ರತಾ ಸಿಬ್ಬಂದಿ ಫೋಟೊ ತೆಗೆಯಲು ಅವಕಾಶ ಮಾಡಿಕೊಡಲಿಲ್ಲ. ಅಲ್ಲಿಯೇ ಕೆಲ ಮಕ್ಕಳ ಜತೆಗೆ ಪ್ರಿಯಾಂಕಾ ವಾದ್ರಾ ಅವರು ಕುಶಲೋಪರಿ ವಿಚಾರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು, ನಾನಿಲ್ಲಿ ಇಡ್ಲಿ, ದೋಸೆ ಸವಿದಿದ್ದೇನೆ. ಎಲ್ಲವೂ ತುಂಬಾ ರುಚಿಕರವಾಗಿತ್ತು. ಇದನ್ನು ಮನೆಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೇನೆ. ನಾನು ಇದನ್ನು ಮನೆಯಲ್ಲಿಯೂ ಟ್ರೈ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧಕ್ಷ ಬಿ.ವಿ.ಶ್ರೀನಿವಾಸ್, ಎಐಸಿಸಿ ಮಾಧಮ ವಕ್ತಾರೆ ಐಶ್ವರ್ಯ ಮಹದೇವ್ ಇದ್ದರು.