ಮೈಷುಗರ್ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ

Spread the love

ಮೈಷುಗರ್ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ

ಮಂಡ್ಯ: ಮೈಷುಗರ್ ನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ.

ಮೈಸೂರು ಬೆಂಗಳೂರು ಹೆದ್ದಾರಿಯ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ಮೈಷುಗರ್ ಹೋರಾಟದ 30 ನೇ ದಿನದ ಧರಣಿಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಧರಣಿ ನಿರತರನ್ನು ಉದ್ದೇಶಿಸಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿದರು.

ಮೈಷುಗರ್ ಗಾಗಿ ನಡೆಯುತ್ತಿರುವ ಹೋರಾಟ ಪಕ್ಷಾತೀತವಾಗಿದ್ದು, ಜಾತಿ, ವರ್ಗ, ರಾಜಕೀಯಕ್ಕೆ ಸೀಮಿತವಲ್ಲ. ರಾಜ್ಯದ ಕಬ್ಬು ಬೆಳೆಗಾರರ ಹಿತಕ್ಕೆ ಸೀಮಿತವಾಗಿದೆ ಎಂದು ಅವರು ಹೇಳಿದರು. ಸರ್ಕಾರಿ ಸ್ವಾಮ್ಯದ ಈ ಕಾರ್ಖಾನೆ ನಿಗದಿ ಮಾಡುವ ಬೆಲೆಯನ್ನು ರಾಜ್ಯದ ಎಲ್ಲಾ ಕಾರ್ಖಾನೆಗಳು ಪಾಲಿಸಬೇಕಾಗುತ್ತದೆ.ಆದ್ದರಿಂದ ಇದರಲ್ಲಿ ರಾಜ್ಯದ ರೈತರ ಹಿತ ಅಡಗಿದೆ. ರಾಜರ ಆಡಳಿತದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಗಾಂಧೀಜಿಯವರು ಇಲ್ಲಿನ ಉಕ್ಕು ಕಾರ್ಖಾನೆ, ಕಾಗದದ ಕಾರ್ಖಾನೆ, ಮೈಷುಗರ್ ಕಾರ್ಖಾನೆಯಂತಹ ಉದ್ದಿಮೆಗಳನ್ನು ಹಾಗೂ ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಕಂಡು ರಾಜರಿಗೆ ರಾಜರ್ಷಿ ಎಂಬ ಬಿರುದು ನೀಡಿದ್ದರು. ಗಾಂಧೀಜಿಯಿಂದ ಹೊಗಳಿಸಿಕೊಂಡಿರುವ ನಾಲ್ವಡಿಯವರು ಸ್ಥಾಪಿಸಿರುವ ಮೈಷುಗರ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಬಿಡಬಾರದು ಎಂದರು.

ಈ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಲು ನಿರಂತರ ಹೋರಾಟ ನಡೆಸಲಾಗುವುದು. ಹೋರಾಟಗಾರರು ಯಾವುದೇ ಒತ್ತಡಕ್ಕೆ ಕರಾರಿಗೆ ಮಣಿಯಬಾರದು. ಕಾರ್ಖಾನೆಯನ್ನು ಖಾಸಗಿಗೆ ವಹಿಸಲು ನಾವು ಕಾರಣರಾದರೆ ಮುಂದಿನ ಪೀಳಿಗೆಯ ಶಾಪಕ್ಕೆ ಗುರಿಯಾಗುತ್ತೇವೆ. ಕೆಲ ಬಾಡಿಗೆ ಹೋರಾಟಗಾರರು ಖಾಸಗಿ ಪರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಯಾವುದೇ ಬೆಲೆಯಿಲ್ಲ. ಸರ್ಕಾರ ರೈತರ ಈ ಹೋರಾಟವನ್ನು ನಿರ್ಲಕ್ಷ್ಯ ಮಾಡಿದರೆ ಕಾನೂನು ಸುವ್ಯವಸ್ಥೆ ಹದಗೆಡಬಹುದು. ಅಶಾಂತಿ ಉಂಟಾದರೆ ನಾವು ಕಾರಣರಲ್ಲ.ಸರ್ಕಾರವೇ ಇದರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಮೈಷುಗರ್ ಕೇವಲ ಸಕ್ಕರೆ ಉತ್ಪಾದನೆ ಮಾಡುವುದಿಲ್ಲ. ಕೋ-ಜನರೇಷನ್, ಡಿಸ್ಟಿಲರಿ, ಎಥೆನಾಲ್ ತಯಾರಿಕಾ ಘಟಕವನ್ನು ಹೊಂದಿದೆ. ಇದನ್ನು ಸರಿಯಾಗಿ ನಡೆಸಿದರೆ ವರ್ಷಕ್ಕೆ 25 ಕೋಟಿ ಲಾಭ ಗಳಿಸಬಹುದು. ಈ ಹಿಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರಗಳು ಮೈಷುಗರ್ ಅಭಿವೃದ್ದಿಗೆ ಸಾಕಷ್ಟು ಹಣ ನೀಡಿತ್ತು. ಆನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಾಂಡವಪುರ ಕಾರ್ಖಾನೆ ಮತ್ತು ಮೈಷುಗರ್ಗೆ ಒಬ್ಬರೇ ಅಧ್ಯಕ್ಷರನ್ನು ನೇಮಿಸಿ ಅವರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ನೀಡಲಾಗಿತ್ತು. ಆ ಸಮಯದಲ್ಲಿಯೂ ಮೈಷುಗರ್ ಅಭಿವೃದ್ದಿಗೆ ಹಣವನ್ನು ನೀಡಿದ್ದು, ಆದರೆ ಆ ಹಣ ಏನಾಯಿತು ಎನ್ನುವುದು ಗೊತ್ತಿಲ್ಲ. ಯಾರ್ಯಾರು ಅಧ್ಯಕ್ಷರಾಗಿದ್ದಾಗ, ಎಂ.ಡಿ ಗಳಿದ್ದಾಗ ಎಷ್ಟೆಷ್ಟು ಹಣ ಕೊಟ್ಟಿದ್ದೀರಿ ತನಿಖೆಯಾಗಲಿ ಎಂದು ಆಗ್ರಹಿಸಿದರು.

ತಾವು ಅಧ್ಯಕ್ಷರಾಗಿದ್ದ ಕಾಲದಲ್ಲಿ ಕಾರ್ಖಾನೆ 96 ಲಕ್ಷ ರೂ. ಆದಾಯ ಗಳಿಸಿತ್ತು. ಆ ಹಣವನ್ನು ಕಾರ್ಮಿಕರ ಮಕ್ಕಳ ಒಳಿತಿಗಾಗಿ ಕಾಲೇಜು ಮತ್ತು ಕೈಗಾರಿಕಾ ತರಬೇತಿ ಕೇಂದ್ರವನ್ನು ಆರಂಭಿಸಲಾಯಿತು ಎಂದು ತಿಳಿಸಿದರು. ನಾಲ್ವಡಿ ಕೃಷ್ಣರಾಜಒಡೆಯರ್,ಕೋಲ್ಮನ್ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ಶ್ರಮದ ಫಲವಾಗಿ ಮೈಷುಗರ್ ಕಾರ್ಖಾನೆ ಪ್ರಾರಂಭವಾಗಿದೆ. ಮಹಾರಾಜರು ತಮ್ಮ ಒಡವೆಗಳನ್ನು ಮಾರಿ ಜಲಾಶಯ ಮತ್ತು ಮೈಷುಗರ್ ಕಾರ್ಖಾನೆಯನ್ನು ಸ್ಥಾಪಿಸಿದ್ದಾರೆ. ಮೈಷುಗರ್ ಜಿಲ್ಲೆಯ ಜೀವನಾಡಿಯಾಗಿದೆ. ಚಿನ್ನದ ಮೊಟ್ಟೆ ಇಡುವ ಕಾರ್ಖಾನೆಯಾಗಿದೆ. ಆದರೆ ಈ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವುದರ ಹಿಂದೆ ಬಂಡವಾಳಶಾಹಿಗಳ ಕುತಂತ್ರ ಅಡಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸದೆ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿಯಿಂದ ನಡಿಗೆಯಲ್ಲಿ ಆಗಮಿಸಿ 5 ನಿಮಿಷಗಳ ಕಾಲ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಧರಣಿ ನಡೆಸಿದರು.


Spread the love