ಮೈಸೂರಲ್ಲಿ ಮುಜುಗರ ತಂದ ಡಿಸಿ- ಪಾಲಿಕೆ ಕಮೀಷ್ನರ್ ಕಿತ್ತಾಟ

Spread the love

ಮೈಸೂರಲ್ಲಿ ಮುಜುಗರ ತಂದ ಡಿಸಿ- ಪಾಲಿಕೆ ಕಮೀಷ್ನರ್ ಕಿತ್ತಾಟ

ಮೈಸೂರು: ಮೈಸೂರಿನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ಬೀದಿ ಬಂದಿದ್ದು ರಾಜ್ಯದಾದ್ಯಂತ ಸುದ್ದಿಯಾಗುತ್ತಿದೆ. ಇದೊಂದು ರೀತಿಯಲ್ಲಿ ರಾಜ್ಯ ಸರ್ಕಾರಕ್ಕೂ ಮುಜುಗರ ತಂದಿದೆ.

ಇದೀಗ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪಗಳ ಸುರಿ ಮಳೆಗೈದಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಯಾವಾಗ ಪಾಲಿಕೆ ಆಯುಕ್ತರು ರಾಜೀನಾಮೆ ನೀಡಿದರೋ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ವಿರುದ್ಧ ಗರಂ ಆಗಿದ್ದಾರೆ. ಅವರ ವರ್ಗಾವಣೆಗೆ ಆಗ್ರಹಿಸುವುದರೊಂದಿಗೆ ಶಿಲ್ಪಾ ನಾಗ್ ಅವರು ರಾಜೀನಾಮೆ ಹಿಂಪಡೆಯುವಂತೆ ಒತ್ತಡಗಳು ಕೇಳಿ ಬರುತ್ತಿದೆ. ಈಗಾಗಲೇ ಜಿಲ್ಲೆಗೆ ಬೆಂಗಳೂರಿನಿಂದ ಆಗಮಿಸಿರುವ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಈ ಸಂಬಂಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.

ಇದೆಲ್ಲದರ ನಡುವೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತ್ರ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜಿಲ್ಲಾಡಳಿತ ಹಾಗೂ ತಮ್ಮ ಮೇಲೆ ಆರೋಪ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್ ಅವರಿಗೆ ತಿರುಗೇಟು ನೀಡಿದ್ದಾರೆ.

ನನ್ನ ಮೇಲೆ ಹೊರಿಸಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ನಾನು ಯಾರಿಗೂ ಕಿರುಕುಳ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಡಳಿತ ಏನು ಕೆಲಸ ಮಾಡುತ್ತಿಲ್ಲ ಎಂಬ ರೀತಿಯಲ್ಲಿ ಇತ್ತೀಚೆಗೆ ಶಿಲ್ಪಾ ನಾಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಜಿಲ್ಲಾಡಳಿತದಿಂದ ನಮಗೆ ನೆರವು ಸಿಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ತಮ್ಮ ವೈಫಲ್ಯವನ್ನು ಜಿಲ್ಲಾಡಳಿತದ ಮೇಲೆ ಹೊರಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಎಲ್ಲರ ಸಹಕಾರ ಬೇಕಾಗುತ್ತೆ. ಅಂಕಿ ಅಂಶಗಳನ್ನು ಅಧಿಕೃತವಾಗಿ ನಾವು ಕೊಡುತ್ತಿದ್ದೇವೆ. ಕೊರೋನಾ ವಿಚಾರದಲ್ಲಿ ಅಂಕಿ ಅಂಶ ತಪ್ಪಾಗಬಾರದು. ವಾರ್ಡ್ ಮತ್ತು ಪಂಚಾಯಿತಿಗಳಲ್ಲಿ ಇವತ್ತು 400 ನಾಳೆ 40 ಬರಬಾರದು. ಅಂಕಿಅಂಶ ಸರಿ ಇರಬೇಕು ಎಂಬ ಕಾರಣಕ್ಕೆ ನಮ್ಮ ಒತ್ತಡ ಅಷ್ಟೇ. ನಾನು ಅಥಾರಿಟಿ ಅಲ್ಲ ಅನ್ನೋದನ್ನು ಸಿಎಸ್ ಕ್ಲಾರಿಫೈ ಮಾಡ್ತಾರೆ. ಅಧಿಕಾರಿಗಳು ಏನೇ ಸಮಸ್ಯೆ ಆದರೂ ಫೋರಂ ಇರುತ್ತೆ ಅಲ್ಲಿ ಹೇಳಬಹುದು. ಹೈಯರ್ ಆರ್ಮಿ ಇರುತ್ತೆ ಅಲ್ಲಿ ಹೇಳಬಹುದಿತ್ತು ಅದನ್ನು ಬಿಟ್ಟು ಸಾರ್ವ ಜನಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ.

ಜುಲೈ ಒಳಗೆ ಜಿಲ್ಲೆಯ‌ನ್ನು ಕೋವಿಡ್ ಮುಕ್ತ ಮಾಡಬೇಕು. ಅಧಿಕೃತ ಮಾಹಿತಿ ತಪ್ಪಾಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಈಗಾಗಲೇ ಜಿಲ್ಲೆಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಬರಲಿದ್ದು ಅವರ ಗಮನಕ್ಕೆ ಎಲ್ಲವನ್ನು ತರುವುದಾಗಿ ಹೇಳಿದ್ದಾರೆ.

ಇದೆಲ್ಲದರ ನಡುವೆ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ರೋಹಿಣಿ ಸಿಂಧೂರಿ ಅವರು ನಿರ್ಮಿಸಿರುವ ಈಜುಕೊಳ, ಜಿಮ್ ಕುರಿತು ತನಿಖೆ ನಡೆಸಿ ಏಳು ದಿನದೊಳಗೆ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ರಾಜ್ಯ ಸರ್ಕಾರ ಆದೇಶ ನೀಡಿರುವುದು ಬೆಳಕಿಗೆ ಬಂದಿದೆ.

ಕೋವಿಡ್ ಸಂಕಷ್ಟದಲ್ಲಿ ಸುಮಾರು ಐವತ್ತು ಲಕ್ಷ ಖರ್ಚು ಮಾಡಿ ಈಜುಕೊಳ ಮತ್ತು ಜಿಮ್ ನಿರ್ಮಿಸಿದ್ದರ ಬಗ್ಗೆ ಮತ್ತು ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸವು ಪಾರಂಪರಿಕ ಕಟ್ಟಡವಾಗಿರುವುದರಿಂದ ಅಲ್ಲಿ ಯಾವುದೇ ರೀತಿಯ ಹೊಸ ಕಾಮಗಾರಿ ನಡೆಸಬಾರದು ಎಂಬ ಮಾತುಗಳು ಕೇಳಿ ಬಂದಿದ್ದವು.

ಇದರ ನಡುವೆ ಶಾಸಕ ಸಾ.ರಾ.ಮಹೇಶ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ತುಮಕೂರಿನ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಅವರು ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದರು.

ಈ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸವಾದ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಉಂಟಾಗಿರುವ ಬಗ್ಗೆ ಪತ್ರವನ್ನು ಉಲ್ಲೇಖಿಸಿರುವ ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಕೆ.ಎನ್.ಮೂರ್ತಿ ಅವರು ಪ್ರಾದೇಶಿಕ ಆಯುಕ್ತರಿಗೆ ತುರ್ತು ಪತ್ರದ ಮೂಲಕ ತನಿಖೆಗೆ ಆದೇಶ ನೀಡಿದ್ದಾರೆ.


Spread the love