
ಮೈಸೂರಲ್ಲಿ ವಿಷ್ಣು ಸ್ಮಾರಕ ಲೋಕಾರ್ಪಣೆ
ಮೈಸೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಕೋಟ್ಯಂತರ ಅಭಿಮಾನಿಗಳ ಆಸೆ ಕೊನೆಗೂ ಸಾಕಾರಗೊಂಡಿದ್ದು, 13 ವರ್ಷಗಳ ಬಳಿಕ ನಗರದ ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದ ಉದ್ಬೂರ್ ಗೇಟ್ ಬಳಿ ನಿರ್ಮಿಸಿರುವ ಸ್ಮಾರಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ, ಸ್ಮಾರಕದಲ್ಲಿ ನಿರ್ಮಿಸಿರುವ 6.5 ಅಡಿ ಎತ್ತರದ ವಿಷ್ಣುವರ್ಧನ್ ಪ್ರತಿಮೆಯನ್ನೂ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಬೊಮ್ಮಾಯಿ ಅವರು, 70ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣುವರ್ಧನ್ ಅವರು, ನಾಗರಹಾವು ಚಿತ್ರದ ಮೂಲಕ ಮನೆಮಾತಾದರು. 4 ದಶಕಗಳ ಕಾಲ ಚಿತ್ರರಂಗ ಆಳಿದ ಅವರು, ಅಭಿನಯದಿಂದಲೇ ಕನ್ನಡ ಸಂಸ್ಕೃತಿಯ ಧ್ವಜವನ್ನು ಎತ್ತಿಹಿಡಿದಿದ್ದಾರೆ. ಅವರ ಅಭಿನಯ, ಕಲೆ, ಸಾಹಸ, ಸಾಧನೆ ನಮ್ಮ ಕಣ್ಣಮುಂದಿದೆ. ನಾನು ವಿಷ್ಣುವರ್ಧನ್ ಅಭಿಮಾನಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ.
ವಿಷ್ಣುವರ್ಧನ್ ಪೌರಾಣಿಕ, ಸಾಮಾಜಿಕ, ಸಾಹಸ ಸೇರಿದಂತೆ ಎಲ್ಲಾ ತರಹದ ಪಾತ್ರಗಳನ್ನೂ ಮಾಡಿದ್ದಾರೆ. ನೈಜ ಅಭಿನಯದಿಂದಲೇ ಇಂದಿಗೂ ಜನರ ಮನಸ್ಸಿನಲ್ಲಿದ್ದಾರೆ. ಅವರ ಮಾತುಗಳು ಕಲಾರಸಿಕರ ನಾಲಿಗೆಯ ತುದಿಯಲ್ಲಿವೆ. ಭಾವುಕ ಜೀವಿಯಾಗಿದ್ದ ವಿಷ್ಣುವರ್ಧನ್, ಮಾನವೀಯತೆ ಮೆರೆದವರು. ಅವರ ವಿಚಾರಗಳು ಇಂದಿಗೆ ಪ್ರಸ್ತುತವಾಗಿವೆ ಎಂದರು.
ವಿಷ್ಣು ಶಕ್ತಿಯಾಗಿದ್ದವರು ಭಾರತಿ. ಸ್ಮಾರಕ ನಿರ್ಮಾಣಕ್ಕೆ ಸ್ಥಳ ವಿವಾದ ಸೇರಿದಂತೆ ಹಲವು ಕಷ್ಟಗಳು ಎದುರಾದಾಗ ಮೈಸೂರಿನಲ್ಲೇ ಸ್ಥಾಪಿಸುವ ಗಟ್ಟಿ ನಿಲುವು ತೆಗೆದುಕೊಂಡರು. ಅವರಿಂದಾಗಿ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ 11 ಕೋಟಿ ಅನುದಾನ ನೀಡಿದ್ದರಿಂದ ಸ್ಮಾರಕ ಎಲ್ಲರ ಎದುರು ಭವ್ಯವಾಗಿ ನಿಂತಿದೆ. ಸ್ಮಾರಕ ಪ್ರವಾಸಿ ತಾಣವಾಗಿ ನಿರಂತರವಾಗಿ ಚಟುವಟಿಕೆಯಿಂದ ಕೂಡಿರಬೇಕು. ಸಿನಿಮಾ ಕಲಿಕಾ ಸಂಸ್ಥೆ ನಿರ್ಮಾಣ ಕನಸಿದ್ದು, ಅದಕ್ಕೂ ಸರ್ಕಾರ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ನಟ ಅನಿರುದ್ ಮಾತನಾಡಿ, 13 ವರ್ಷಗಳ ಸಂಘರ್ಷ, ಹೋರಾಟ, ಸತತ ಪ್ರಯತ್ನಗಳ ನಡುವೆ ಸ್ಮಾರಕ ಮೈದಳೆದಿದ್ದು, ರಾಜ್ಯ ಸರ್ಕಾರ ಕನ್ನಡಿಗರಿಗೆ ಅರ್ಪಿಸಿರುವ ಕೊಡುಗೆಯಾಗಿದೆ. ಮೈಸೂರಿನಲ್ಲಿ ಹುಟ್ಟಿದ ವಿಷ್ಣು ಅವರು, ಶಾರೀರಿಕವಾಗಿ ನಮ್ಮನ್ನು ಬಿಟ್ಟುಹೋಗಿದ್ದೂ ಕೂಡ ಇಲ್ಲೇ. ವಿಷ್ಣುವರ್ಧನ್ ಆಕಾಂಕ್ಷೆಗಳ ಪ್ರತಿರೂಪವಿದು. ರಂಗ ಚಟುವಟಿಕೆಗಳು, ಚಲನಚಿತ್ರೋತ್ಸವ ಮುಂದಿನ ದಿನಗಳಲ್ಲಿ ನಡೆಯಲಿವೆ. ಪ್ರತಿಮೆಯ ಮುಂದೆ ಚಿತಾಭಸ್ಮ ಇರಲಿದ್ದು, ಶ್ರದ್ಧಾಕೇಂದ್ರವಲ್ಲದೇ ಅಭಿಮಾನಿಗಳ ಸ್ಫೂರ್ತಿ ಕೇಂದ್ರವಾಗಲಿದೆ ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಎಚ್.ಡಿ.ಕೋಟೆ ರಸ್ತೆಯನ್ನು ನಾಲ್ಕು ಪಥದ ರಸ್ತೆ ಮತ್ತು ಮೈಸೂರಿನಲ್ಲೇ ಚಿತ್ರ ನಗರಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಮುಡಾ ಅಧ್ಯಕ್ಷ ಯಶಸ್ವಿನಿ ಎಸ್.ಸೋಮಶೇಖರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎ.ಶಿವಣ್ಣ, ವಾರ್ತಾ ಇಲಾಖೆ ಆಯುಕ್ತ ಪಿ.ಎಸ್.ಹರ್ಷ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.