
ಮೈಸೂರಿಗೆ ಮರಳಿದ ಯಜಮಾನ: ಸಿದ್ದು ವಿರುದ್ಧ ವ್ಯಂಗ್ಯ
ಮೈಸೂರು ಯಜಮಾನರು ಬಾದಾಮಿಯಿಂದ ಕೋಲಾರಕ್ಕೆ ಹೋಗಿ ಮರಳಿ ವರುಣಾಗೆ ಬಂದಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವ್ಯಂಗ್ಯವಾಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಮೈಸೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲಿ ಸ್ಪರ್ಧಿಸಬೇಕು ಗೊಂದಲ ಇರಲಿಲ್ಲ. ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿಶ್ವಾಸ ಇದೆ. ಬಿಜೆಪಿಯಲ್ಲಿ ಒಳೇಟು ಕೊಡುವುದಿಲ್ಲ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಜತೆಗಿದ್ದು ಸಂಬಳ ಪಡೆದ ಪತ್ರಕರ್ತರೊಬ್ಬರು ಅಪ್ಪನಿಗಾಗಿ ಮಗ ಸೀಟು ತ್ಯಾಗ ಮಾಡಿದ ಎಂದು ಬರೆದುಕೊಂಡಿದ್ದಾರೆ. ಏನು ತ್ಯಾಗ ಮಾಡಿದ? ದೇಶ ಕಟ್ಟಿದ್ದನೆ? ಒಲಂಪಿಕ್ಸ್ ಅಥವಾ ವಿಶ್ವ ಚಾಂಪಿಯನ್ ಸ್ಪರ್ಧೆಗಳಲ್ಲಿ ಪದಕ ಗೆದ್ದನೇ? ಈಶ್ವರಪ್ಪ ಮಾಡಿದ್ದು, ಎಸ್.ಎ.ರಾಮದಾಸ್, ರಘುಪತಿ ಭಟ್ ಮಾಡಿದ್ದು ತ್ಯಾಗ ಎಂದು ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಸಿದ್ದರಾಮಯ್ಯ ಕನ್ನಡ ಬರದ ಮೊಮ್ಮಗನನ್ನು ರಾಜಕೀಯಕ್ಕೆ ಪರಿಚಯ ಮಾಡಿದ್ದಾರೆ. ಈಗ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಅಯ್ಯೋ ಅನಿಸುತ್ತದೆ. ಆದರೆ, ಬಿಜೆಪಿಯಲ್ಲಿ 48 ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದೆ. ಪಕ್ಷ ಸಂಘಟನೆ ಮಾಡಿದವರಿಗೆ ಫಲ ಸಿಗುತ್ತದೆ ಎಂಬುದಕ್ಕೆ ಇದೇ ನಿರ್ದಶನ ಎಂದು ಬಿ.ಎಲ್.ಸಂತೋಷ್ ನುಡಿದರು. ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದರೂ ಎಲ್ಲಿಯೂ ಸಿಗದೆ ಮಾನಮಾರ್ಯದೆ ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಮಗ ಕ್ಷೇತ್ರವನ್ನು ಬಿಟ್ಟುಕೊಟ್ಟರು ಹೊರತು ಬೇರೇನೂ ಇಲ್ಲ. ಅದೊಂದು ತ್ಯಾಗವಲ್ಲ ಎಂದರು.
ನಮ್ಮ ನಾಯಕ ನರೇಂದ್ರ ಮೋದಿ ಚುನಾವಣಾ ರಂಗಕ್ಕೆ ಇಳಿದಿಲ್ಲ. ಆಗಲೇ ವಿವಿಧ ಸಮೀಕ್ಷೆಗಳು ಬಿಜೆಪಿಗೆ 103 ಸ್ಥಾನ ಸಿಗಲಿವೆ ಎಂದು ಹೇಳಿವೆ. ಅವರು ರಂಗಕ್ಕೆ ಇಳಿದ ಮೇಲೆ ಬಿಜೆಪಿಗೆ ಸಂಪೂರ್ಣ ಬಹುಮತ ಬರಲಿದೆ. ಕಾಂಗ್ರೆಸ್ 130 ಸೀಟು ಗೆಲ್ಲುತ್ತದೆಂದು ಹೇಳಿರುವ ಸರ್ವೇ ಸಂಸ್ಥೆಗಳ ಹೆಸರನ್ನೇ ನಾವು ಕೇಳಿಲ್ಲ. 2018ರಲ್ಲೂ ಕಾಂಗ್ರೆಸ್ 130 ಸೀಟು ಗೆಲ್ಲುತ್ತದೆಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಕಾಂಗ್ರೆಸ್ 79ಸ್ಥಾನ ಪಡೆಯಿತು ಎಂದು ಹೇಳಿದರು.
ಸಂಸದ ಪ್ರತಾಪಸಿಂಹ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮುನಿರಾಜುಗೌಡ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಸಾಮಾಜಿಕ ಜಾಲತಾಣದ ಸಂಚಾಲಕ ವಿಕಾಸ್, ಜಗದೀಶ್ ಹಿರೇಮನಿ ಮುಂತಾದವರು ಹಾಜರಿದ್ದರು.