ಮೈಸೂರಿಗೆ ಹೆಚ್ಚಿನ ಲಸಿಕೆ ಒದಗಿಸಲು ಸಿಎಂಗೆ ಮನವಿ

Spread the love

ಮೈಸೂರಿಗೆ ಹೆಚ್ಚಿನ ಲಸಿಕೆ ಒದಗಿಸಲು ಸಿಎಂಗೆ ಮನವಿ

ಮೈಸೂರು: ಮೈಸೂರಿನಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯದಲ್ಲಿ ಶೇ 100ರಷ್ಟು ಸಾಧನೆ ಮಾಡುವ ಗುರಿ ಹೊಂದಿರುವುದರಿಂದ ಹೆಚ್ಚಿನ ಲಸಿಕೆ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿದ ವೀಡಿಯೋ ಸಂವಾದದಲ್ಲಿ ಉಸ್ತುವಾರಿ ಸಚಿವರು ಮನವಿ ಮಾಡಿಕೊಂಡಿದ್ದು, ಮೈಸೂರು ಜಿಲ್ಲೆಯಲ್ಲಿ ಈಗ ಶೇ. 72 ರಷ್ಟು ಲಸಿಕಾಕರಣ ಆಗಿದೆ. 45 ವರ್ಷ ಮೇಲ್ಪಟ್ಟವರಿಗೆ ಶೇ. 100 ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಸಾಕಾಗುವಷ್ಟು ಡೋಸ್ ಲಸಿಕೆ ಒದಗಿಸಬೇಕು ಎಂದು ಕೇಳಿದರು.

ಜಿಲ್ಲೆಯಲ್ಲಿ ವೈದ್ಯರ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದ್ದೇವೆ. ಕೋವಿಡ್ ಪರೀಕ್ಷೆಯ ಸಂಖ್ಯೆಯನ್ನು ಸಹ ಹೆಚ್ಚಿಸಿದ್ದೇವೆ. ಇದರಿಂದ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಕಂಡು ಬಂದರೂ ಸಹ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ ಎಂದರು. ಮನೆ, ಮನೆ ಸಮೀಕ್ಷೆಯನ್ನು ಈಗ ಬಹುತೇಕ ಮುಗಿಸಿದ್ದೇವೆ. ಇನ್ನೊಂದು ಸುತ್ತು ಮಾಡಲು ಆಲೋಚಿಸಲಾಗುತ್ತಿದೆ. ಈ ವಾರದಲ್ಲಿ ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗುವ ನಿರೀಕ್ಷೆ ಇದೆ. ಸೋಂಕಿನ ಲಕ್ಷಣ ಇಲ್ಲದಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗುತ್ತಿದೆ, ಇದರಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿದೆ. ಜಿಲ್ಲೆಯಲ್ಲಿ 88 ಬ್ಲಾಕ್ ಫಂಗಸ್‌ಗೆ ಪ್ರಕರಣಗಳಿವೆ. ಈ ಪೈಕಿ 62 ಸಕ್ರಿಯ ಪ್ರಕರಣಗಳಿವೆ. 10 ಸಾವು ಉಂಟಾಗಿದೆ. ಉಳಿದವರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳ ವೀಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿ.ಇ.ಓ. ಎ.ಎಂ.ಯೋಗೀಶ್, ಪೋಲೀಸ್ ಆಯುಕ್ತ ಡಾ. ಚಂದ್ರಗುಪ್ತ, ‌ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್, ಎಂ.ಎಂ.ಸಿ.ಆರ್.ಐ. ಡೀನ್, ಡಾ. ನಂಜರಾಜ್, ಜಿಲ್ಲಾ ಸರ್ಜನ್ ಡಾ. ರಾಜೇಶ್ವರಿ ದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಅಮರನಾಥ್, ಪಾಲಿಕೆ ಆರೋಗ್ಯ ಅಧಿಕಾರಿ ಡಾ. ನಾಗರಾಜು ಮತ್ತಿತರರು ಇದ್ದರು.


Spread the love

Leave a Reply

Please enter your comment!
Please enter your name here