ಮೈಸೂರಿನಲ್ಲಿ ಆಟೋ ನಗರ ನಿರ್ಮಾಣಕ್ಕೆ ಭೂಮಿಪೂಜೆ

Spread the love

ಮೈಸೂರಿನಲ್ಲಿ ಆಟೋ ನಗರ ನಿರ್ಮಾಣಕ್ಕೆ ಭೂಮಿಪೂಜೆ

ಮೈಸೂರು: ಒಂದು ದಶಕಗಳಿಂದ ಮುಡಾ ಮತ್ತು ಭೂ ಮಾಲೀಕರ ನಡುವೆ ಇದ್ದ ಭೂ ವ್ಯಾಜ್ಯ ಸುಖಾಂತ್ಯ ಕಾಣುತ್ತಿದ್ದಂತೆ ಬಹು ನಿರೀಕ್ಷಿತ ಆಟೋನಗರ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದ್ದು, ನಾಲ್ಕು ತಿಂಗಳಲ್ಲಿ ಮೂಲ ಸೌಕರ್ಯಗಳುಳ್ಳ ಆಟೋನಗರ ತಲೆ ಎತ್ತಿ ಸಾರ್ವಜನಿಕರ ಸೇವೆಗೆ ಅಣಿಯಾಗಲಿದೆ.

ಮೊದಲ ಹಂತದಲ್ಲಿ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಮಂಡಕಳ್ಳಿ ಬಳಿ 4.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ನಂತರ ನಗರದ ಪ್ರಮುಖ ಉಳಿದ ಮೂರು ದಿಕ್ಕುಗಳಲ್ಲೂ ತಲಾ 5 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಮುಡಾ ಮುಂದಾಗಿದೆ. ನಂಜನಗೂಡು ರಸ್ತೆಯಲ್ಲಿರುವ ಆಸ್ಟ್ರಮ್ ಗ್ರ್ಯಾಂಡ್‌ವ್ಯೆ ಅಪಾರ್ಟ್‌ಮೆಂಟ್ ಸಮೀಪದ ಮಂಡಕಳ್ಳಿ ಗ್ರಾಮದ ಸರ್ವೆ ನಂ.64ಮತ್ತು 65ರಲ್ಲಿರುವ 10 ಎಕರೆ 10 ಗುಂಟೆಯಲ್ಲಿ ನಿರ್ಮಿಸುವ ಆಟೋನಗರ ನಿರ್ಮಾಣಕ್ಕೆ ಶಾಸಕ ಎಸ್.ಎ.ರಾಮದಾಸ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ಗುದ್ದಲಿಪೂಜೆ ನೆರವೇರಿಸಿದರು.

ಮೊದಲನೇ ಹಂತದ ಆಟೋನಗರ ನಿರ್ಮಾಣಕ್ಕೆ 4.50 ಕೋಟಿ ರೂ.ಮೊತ್ತಕ್ಕೆ ಟೆಂಡರ್ ಆಹ್ವಾನಿಸಿ ಗುತ್ತಿಗೆದಾರರನ್ನು ನೇಮಿಸಲಾಗಿದೆ. ಉದ್ದೇಶಿತ ಆಟೋನಗರ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ,ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಉದ್ಯಾನವನ ನಿರ್ಮಾಣ, ಬಯಲು ಜಾಗ, ಪಾರ್ಕಿಂಗ್ ವ್ಯವಸ್ಥೆ, ಬಡಾವಣೆಗೆ ರಕ್ಷಣಾ ಗೋಡೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ನೀರು, ಗಾಳಿಯಿಂದ ಬರುವ ಕೆಟ್ಟ ವಾಸನೆಗಳನ್ನು ತಡೆಯಲು ನಗರದ ನಾಲ್ಕು ದಿಕ್ಕುಗಳಲ್ಲಿ ಆಟೋನಗರ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು. ಆಟೋನಗರ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ ಬಳಿಕ ಮಾತನಾಡಿ, ಮೈಸೂರಿನ ಕುಡಿಯುವ ನೀರು, ಸ್ವಚ್ಛಗಾಳಿ, ಸ್ವಚ್ಛಪರಿಸರ ಉಳಿಸಿಕೊಳ್ಳಲು ಆಟೋನಗರ ನಿರ್ಮಾಣ ಮಾಡಲಾಗುತ್ತದೆ. ಏಕಕಾಲದಲ್ಲಿ ನಾಲ್ಕು ಕಡೆಗಳಲ್ಲಿ ನಿರ್ಮಿಸುವ ಆಲೋಚನೆ ಇತ್ತಾದರೂ ಮೊದಲಿಗೆ ಮಂಡಕಳ್ಳಿಯಲ್ಲಿ ಶುರು ಮಾಡುತ್ತಿದ್ದೇವೆ. ಇನ್ನು ಮೂರು ಕಡೆಗಳಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದರು. ನಗರದ ಯಾವುದಾದರೂ ಭಾಗಗಳಲ್ಲಿ ವಾಹನಗಳು ಕೆಟ್ಟು ನಿಂತು ಹೋದರೆ ಅದನ್ನು ಗ್ಯಾರೇಜ್‌ಗೆ ತಂದು ರಿಪೇರಿ ಮಾಡಿಸುವ ವ್ಯವಸ್ಥೆ ಇರುತ್ತದೆ. ಫ್ರಾನ್ಸ್‌ನಲ್ಲಿ ನಡೆದ ವಿಶ್ವ ಪರಿಸರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರಮೋದಿ ಅವರು ನೀರಿನಿಂದ ಬರುವ ಕ್ಯಾನ್ಸರ್ ಮೊದಲಾದ ಸಮಸ್ಯೆಗಳು, ಗಾಳಿಯಿಂದ ಬರುವ ಕೆಟ್ಟ ವಾಸನೆಗಳನ್ನು ತಡೆಯಲು 2.50 ಲಕ್ಷ ಕೋಟಿ ರೂ.ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವ ಹೊತ್ತಲ್ಲೇ ಆಟೋನಗರಕ್ಕೆ ಗುದ್ದಲಿಪೂಜೆ ನೆರವೇರಿಸಿರುವುದು ಸಂತೋಷವಾಗಿದೆ ಎಂದು ಹೇಳಿದರು.

ಮುಡಾ ಅಧೀಕ್ಷಕ ಚನ್ನಕೇಶವ, ಮೈಸೂರು ಸಿಟಿ ಮೋಟಾರ್ ವೆಹಿಕಲ್ ಮೆಕ್ಯಾನಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎನ್.ಮಹೇಶ್ ರಾಜೇ ಅರಸ್, ಉಪಾಧ್ಯಕ್ಷರಾದ ಸೈಯದ್ ನಯಾಜ್ ಅಹ್ಮದ್, ಅಮಾನುಲ್ಲಾ, ಡಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ.ಎಲ್.ಶಂಕರ್, ಕಾರ್ಯದರ್ಶಿಗಳಾದ ಪದ್ಮನಾಭ, ಜಯರಾಮ್ ಇನ್ನಿತರರು ಹಾಜರಿದ್ದರು.


Spread the love