
ಮೈಸೂರಿನಲ್ಲಿ ಆನ್ ಲೈನ್ ನಲ್ಲಿ ವಂಚಿಸುತ್ತಿದ್ದ ಮೂವರ ಬಂಧನ
ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಯುವತಿಯನ್ನು ಪರಿಚಯಿಸಿಕೊಂಡು ವಿದೇಶದಿಂದ ಗಿಫ್ಟ್ ಕಳುಹಿಸಿ ಕೊಡುವುದಾಗಿ ವಿವಿಧ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದ ಅಸ್ಸಾಂ ರಾಜ್ಯದ ಮೂವರು ಆರೋಪಿಗಳನ್ನು ಮೈಸೂರು ಜಿಲ್ಲಾ ಸೆನ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಈ ಕುರಿತಂತೆ ಎಸ್.ಪಿ.ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದು, ಅಸ್ಸಾಂ ರಾಜ್ಯದ ಕರಿಮ್ ಗಂಜ್ ಜಿಲ್ಲೆಯ ನಿಲಾಸಿಗಳಾದ ಸಿಂಬುಲಾಲ್ ಚೊರಾಯತ್(26), ಲಾಲ್ ಸಂಗೀಕಾರ್ ಚೊರಾಯತ್(23) ಮತ್ತು ಹರಿಲಾಲ್ ಚೊರಾಯತ್(22) ಎಂಬವರು ಬಂಧಿತ ಆರೋಪಿಗಳು.
ಆರೋಪಿಗಳಿಂದ 26 ಸಾವಿರ ರೂ. ನಗದು, 6 ಮೊಬೈಲ್, 2 ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಮನೆಯ ಬಾಡಿಗೆ ಕರಾರು ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಇನ್ಸ್ ಟಾ ಗ್ರಾಮ್ ಮೂಲಕ ಜನರನ್ನು ಪರಿಚಯ ಮಾಡಿಕೊಂಡು ವಾಟ್ಸಪ್ ಚಾಟಿಂಗ್ ಮೂಲಕ ಬೆಲೆ ಬಾಳುವ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದುಕೊಂಡು ವಂಚಿಸುತ್ತಿದ್ದರು. ಇದೇ ರೀತಿ ನಂಜನಗೂಡು ತಾಲೂಕು ಬದನವಾಳು ಗ್ರಾಮದ ಹಿಮಶ್ವೇತಾ ಎಂಬುವರಿಗೆ ರಾಬರ್ಟ್ ಎಡ್ಗರ್ ಎಂಬ ಹೆಸರಿನಲ್ಲಿ ಪರಿಚಿತನಾದ ಆರೋಪಿ ಆಕೆಗೆ ಐಫೋನ್ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಗಿಫ್ಟ್ ನೀಡುತ್ತಿದ್ದು, ದಿಲ್ಲಿ ಏರ್ಪೋರ್ಟ್ ನಿಂದ ಕರೆ ಬಂದಾಗ ಅವರ ಖಾತೆಗೆ ಹಣ ಹಾಕಿ ಪಡೆದುಕೊಳ್ಳುವಂತೆ ನಂಬಿಸಿದ್ದಾನೆ. ಬಳಿಕ ಆತ ಹೇಳಿದ ಖಾತೆಗೆ 4.77 ಲಕ್ಷ ಹಣವನ್ನು ಪಾವತಿಸಿದರೂ ಯಾವುದೇ ಗಿಫ್ಟ್ ಬರದ ಹಿನ್ನೆಲೆ 2022ರ ಸೆಪ್ಟಂಬರ್ 4ರಂದು ಹಿಮಶ್ವೇತ ಸೆನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಇವರೆಲ್ಲರಿಗೂ ಮಾರ್ಗದರ್ಶನ ಮಾಡಿ ಎಲ್ಲಾ ಹಣವನ್ನು ಪಡೆಯುತ್ತಿದ್ದ ನೈಜಿರಿಯಾ ಪ್ರಜೆ ನಾಪತ್ತೆಯಾಗಿದ್ದಾನೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಸೆನ್ ಪೊಲೀಸ್ ಠಾಣೆಯ ನಿರೀಕ್ಷಕ ಶಬ್ಬೀರ್ ಹುಸೇನ್, ಉಪ ನಿರೀಕ್ಷಕ ಲೋಕೇಶ್, ಸಿಬ್ಬಂದಿಯಾದ ಮಂಜುನಾಥ್ ರಂಗಸ್ವಾಮಿ, ಬಿ.ವಿ. ಮಂಜುನಾಥ, ಮಹದೇಸ್ವಾಮಿ, ವೆಂಕಟೇಶ, ಪುಷ್ಪಲತಾ, ಮಹೇಶ, ಮಹೇಶ್ಕುಮಾರ್, ಆದರ್ಶ್, ಸಿಂಧು ಭಾಗಿಯಾಗಿದ್ದರು.