
ಮೈಸೂರಿನಲ್ಲಿ ಚಲಿಸುವ ಸರ್ಕಾರ ವಾಹನಕ್ಕೆ ಚಾಲನೆ
ಮೈಸೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಕ್ಷಣಮಾತ್ರದಲ್ಲಿ ಮಾಹಿತಿ ಒದಗಿಸಬಹುದಾದ ಚಲಿಸುವ ಸರ್ಕಾರ ಯೋಜನೆ ಹೊತ್ತ ವಾಹನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಚಾಲನೆ ನೀಡಿದರು.
ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಪರಿಕಲ್ಪನೆಯಲ್ಲಿ ಈ ಯೋಜನೆ ಜಾರಿ ಮಾಡಲಾಗಿದ್ದು, ನಗರದ ಲಲಿತ ಮಹಲ್ ಹೋಟೆಲ್ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಲಿಸುವ ಸರ್ಕಾರಕ್ಕೆ ಸಿಎಂ ಹಸಿರು ನಿಶಾನೆ ತೋರಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಂತೆ ಕೇಂದ್ರ ಸರ್ಕಾರದ 202 ಯೋಜನೆಗಳು ಹಾಗೂ 101 ಕಾರ್ಯಕ್ರಮಗಳನ್ನು ಒಳಗೊಂಡ ಮೈ ಸ್ಕೀಮ್‌ಗಳಲ್ಲಿ ಇರುವ ಎಲ್ಲಾ ಯೋಜನೆಗಳನ್ನು ಮುಟ್ಟಿಸುವ ಪ್ರಯತ್ನ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಆನ್ ಲೈನ್‌ನಲ್ಲಿ ಸಾರ್ವಜನಿಕರಿಗೆ ತಿಳವಳಿಕೆ ನೀಡುವುದು ಮತ್ತು ಅರ್ಜಿಗಳನ್ನು ಸ್ವೀಕಾರ ಮಾಡುವ ಹಾಗೂ ಅದಕ್ಕೆ ತಾರ್ಕಿಕ ಅಂತ್ಯ ನೀಡುವ ಈ ಹೊಸ ಯೋಜನೆಯನ್ನು ಚಲಿಸುವ ಸರ್ಕಾರ ಹೊತ್ತ ವಾಹನದಲ್ಲಿ ಅಳವಡಿಸಲಾಗಿದೆ.
ವಾಹನ ಎಲ್ಲಾ ಬೂತ್ ಮಟ್ಟದಲ್ಲಿ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ದಿನಾಂಕದಲ್ಲಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಎಲ್‌ಇಡಿ ಸ್ಕ್ರೀನ್ ಮೂಲಕ ತೋರಿಸುವುದು ಮತ್ತು ಸ್ಥಳದಲ್ಲೇ ಅರ್ಹ ವ್ಯಕ್ತಿಗಳಿಗೆ ಅವರಿಗೆ ಬೇಕಾದ ಯೋಜನೆಗಳಿಗೆ ಆನ್ ಲೈನ್ ಮೂಲಕವಾಗಿ ಅರ್ಜಿಗಳನ್ನು ಮತ್ತು ಅಡಕಗಳನ್ನು ತುಂಬುವ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸುವುದು ಮತ್ತು ಮಂಜೂರಾತಿ ಮಾಡಿಸಿ ತಾರ್ಕಿಕ ಅಂತ್ಯ ನೀಡುವ ಯೋಜನೆ ಒಳಗೊಂಡಿದೆ.
ಪ್ರತಿಯೊಂದು ಕಾಲೇಜು, ಸಂಘ ಸಂಸ್ಥೆಗಳು, ವಸತಿ ನಿಲಯಗಳ ಮುಂದೆ ಭವಿಷ್ಯದ ಪ್ರಜೆಗಳಿಗೆ ಯೋಜನೆಗಳ ಮಹಿತಿ ನೀಡುವ ಹಾಗೂ ಯವ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದೆಂಬ ಮಾಹಿತಿಗಳನ್ನು ಹೊಂದಿದೆ.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ರಾಮದಾಸ್, ಎಲ್.ನಾಗೇಂದ್ರ ಹಾಗೂ ಸ್ಥಳೀಯ ರಾಜಕೀಯ ಪ್ರಮುಖರು ಉಪಸ್ಥಿತರಿದ್ದರು.