ಮೈಸೂರಿನಲ್ಲಿ ಪಂಚರತ್ನ ಯಾತ್ರೆ ಸಮಾರೋಪಕ್ಕೆ ಸಿದ್ಧತೆ

Spread the love

ಮೈಸೂರಿನಲ್ಲಿ ಪಂಚರತ್ನ ಯಾತ್ರೆ ಸಮಾರೋಪಕ್ಕೆ ಸಿದ್ಧತೆ

ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯ ಮಾ.26ರಂದು ಮೈಸೂರಿನಲ್ಲಿ ಸಂಜೆ 4ಗಂಟೆಗೆ ಸಮಾರೋಪಗೊಳ್ಳಲಿದೆ. ಇದಕ್ಕಾಗಿ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.

ನಗರದ ಹೊರಭಾಗದ ಉತ್ತನಹಳ್ಳಿ ರಿಂಗ್ ರಸ್ತೆಯ ನೂರು ಎಕರೆ ಪ್ರದೇಶದ ವಿಶಾಲ ಮೈದಾನದಲ್ಲಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸಿದ್ಧತೆ ಸಮಾರೋಪಾದಿಯಲ್ಲಿ ಸಾಗುತ್ತಿದೆ. ಸುಮಾರು 10 ಲಕ್ಷ ಜನರನ್ನು ಸೇರಿಸಲು ತೀರ್ಮಾನ ಮಾಡಿಕೊಂಡಿದ್ದು, ಈ ಸಂಬಂಧ ಖುದ್ದು ಹೆಚ್.ಡಿ.ಕುಮಾರಸ್ವಾಮಿ ತೆರಳಿ ಸ್ಥಳಪರಿಶೀಲನೆ ನಡೆಸಿದ್ದಾರೆ.

ಇನ್ನು ಸಮಾರಂಭಕ್ಕೂ ಮೊದಲು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ರಿಂಗ್ ರಸ್ತೆಯಿಂದ ಬೃಹತ್ ರೋಡ್ ಶೋ ನಡೆಯಲಿದೆ. ಈ ರೋಡ್ ಶೋ ನಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಎಲ್ಲ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ.

ಸಮಾವೇಶಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ವಿಶಾಲ ಮೈದಾನದಲ್ಲಿ ಕೂರಲು ಆಸನದ ವ್ಯವಸ್ಥೆ, ಊಟ ಹಾಗೂ ಕುಡಿಯುವ ನೀರಿನ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಝಗಮಗಿಸುವ ವಿದ್ಯುತ್ ಬೆಳಕಿನ ಅಲಂಕಾರ ಮಾಡಲಾಗಿದ್ದು, 100×50 ಅಡಿಯ ವಿಶಾಲ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ವೇದಿಕೆಗೆ ಅಚ್ಚುಕಟ್ಟಾದ ವಿದ್ಯುತ್ ದೀಪದ ಮೆರಗು ನೀಡಲಾಗಿದ್ದು, ಮೈದಾನದ ಯಾವುದೇ ಭಾಗದಿಂದಲೂ ವೇದಿಕೆ ಕಾರ್ಯಕ್ರಮ ನೋಡಲು ಸಾಧ್ಯ ಆಗುವಂತೆ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದ ತಪ್ಪಲಲ್ಲಿ ನಡೆಯುತ್ತಿರುವ ಪಂಚರತ್ನ ಸಮಾರೋಪ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು, ಕಾರ್ಯಕರ್ತರು ಬರುತ್ತಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಈ ಜೆಡಿಎಸ್ ಹಬ್ಬಕ್ಕೆ ಭರ್ಜರಿ ಜನ ಸ್ಪಂದನೆ ಸಿಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯದ ಉದ್ದಗಲಕ್ಕೂ ಕಳೆದ ವರ್ಷದ ನವೆಂಬರ್ 18ರಿಂದ ಮಾರ್ಚ್ 24ರವರೆಗೆ ಪಂಚರತ್ನ ರಥಯಾತ್ರೆ ನಡೆಸಿದ್ದೇನೆ. ಎಲ್ಲೆಡೆ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈ ಸಮಾರೋಪ ಸಮಾವೇಶ ಅಷ್ಟೇ ಯಶಸ್ಸು ಕಾಣುತ್ತದೆ ಎಂಬ ವಿಶ್ವಾಸ ನನ್ನದು ಎಂದು ಅವರು ಹೇಳಿದ್ದಾರೆ.


Spread the love