ಮೈಸೂರಿನಲ್ಲಿ ಪ್ರತಿಷ್ಠಿತ ಮಾನ್ಸೂನ್ ರೇಸ್ ಆರಂಭ

Spread the love

ಮೈಸೂರಿನಲ್ಲಿ ಪ್ರತಿಷ್ಠಿತ ಮಾನ್ಸೂನ್ ರೇಸ್ ಆರಂಭ

ಮೈಸೂರು: ಕೊರೊನಾ ಕಾರಣದಿಂದ ನಿಂತು ಹೋಗಿದ್ದ ರೇಸ್ ಚಟುವಟಿಕೆ ಮತ್ತೆ ಆರಂಭವಾಗಲಿದ್ದು, ಇದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮೈಸೂರು ರೇಸ್ ಕ್ಲಬ್ ನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ರೇಸ್ ಸುಮಾರು 18 ದಿನಗಳ ಕಾಲ ನಡೆಯಲಿದೆ. ಗುರುವಾರ ರೇಸ್‍ ಗೆ ಚಾಲನೆ ನೀಡಲಾಗುತ್ತಿದೆ.

ಈ ಕುರಿತಂತೆ ರೇಸ್ ಕ್ಲಬ್ ಅಧ್ಯಕ್ಷ ವೈ.ಬಿ.ಗಣೇಶ್ ಮಾಹಿತಿ ನೀಡಿದ್ದು, 18 ದಿನಗಳ ಕಾಲ ನಡೆಯುವ ಮಾನ್ಸೂನ್ ರೇಸ್‌ನಲ್ಲಿ 140 ರೇಸ್‌ಗಳು ನಡೆಯಲಿವೆ. ಆ.26, ಸೆ.2, 16, 24, ಅ.6, 7, 14, 29 ಹಾಗೂ ಅ.30ರಂದು ಪ್ರಮುಖ ರೇಸ್‌ಗಳು ನಡೆಯಲಿವೆ. ಪ್ರವೇಶ ದರವನ್ನು 100ನಿಂದ 200ಕ್ಕೆ ಏರಿಕೆ ಮಾಡಲಾಗಿದೆ.

ಕೋವಿಡ್ ಕಾರಣ ರೇಸಿಂಗ್ ಚಟಿವಟಿಕೆಗಳು ಕುಂಠಿತಗೊಂಡಿದ್ದವು, ಬೇಸಿಗೆ ರೇಸ್ ಯಶಸ್ವಿಯಾಗಿ ನಡೆದಿದೆ. ರೇಸಿಂಗ್ ಟ್ರ್ಯಾಕ್‌ಗಳನ್ನು ಸಿದ್ಧಗೊಳಿಸಲಾಗಿದ್ದು, ಮೈಸೂರು ರೇಸ್ ಕ್ಲಬ್‌ನ 460 ಕುದುರೆಗಳು, ಬೆಂಗಳೂರು ಚೆನ್ನೈ ವಿವಿಧ ಭಾಗದಿಂದ 200 ಕುದುರೆಗಳು ಭಾಗವಹಿಸಲಿವೆ ಎಂದರು.

ಕ್ಲಬ್‌ನ ಬುಕ್‌ ಮೇಕರ್ಸ್, ಜಯಚಾಮರಾಜೇಂದ್ರ ಗಾಲ್ಫ್ ಕ್ಲಬ್ ರೇಸ್ ಪ್ರಾಯೋಜಿಸಲು ಮುಂದಾಗಿದ್ದಾರೆ. ಕ್ಲಬ್‌ನ ಪಾಲಿನ ಹಣವನ್ನು (ಸ್ಟೇಕ್‌ಮನಿ) ಶೇ 49ರಷ್ಟು ಹೆಚ್ಚಿಸಲಾಗಿದೆ. ಗುಣಮಟ್ಟದ ರೇಸ್ ಸ್ಪರ್ಧೆ ನಡೆಸಲು ಅದರಿಂದ ಅನುಕೂಲವಾಗಲಿದ್ದು, ಪ್ರಸಕ್ತ ಋತುವಿನಲ್ಲಿ 8 ಕೋಟಿ ವೆಚ್ಚವಾಗುವ ಅಂದಾಜಿದೆ ಎಂದು ಹೇಳಿದರು.

ರೇಸ್ ಕ್ಲಬ್‌ಗೆ ತೆರಿಗೆಯ ಹೊರೆ ಹೆಚ್ಚಿರುವುದರಿಂದ ಕ್ಲಬ್ ವಹಿವಾಟು ಸುಮಾರು 500 ಕೋಟಿಯಿಂದ 180 ಕೋಟಿಗೆ ಇಳಿದಿದೆ. ಯೂನಿಟ್ ಬದಲು ಕಮಿಷನ್ ಮೇಲೆ ಜಿಎಸ್‌ಟಿ ವಿಧಿಸುವಂತೆ ಜಿಎಸ್‌ಟಿ ಮಂಡಳಿಗೆ ಮನವಿ ಮಾಡಲಾಗಿದೆ. ಲ್ಯಾಟರಿ, ಕ್ಯಾಸಿನೊ, ರೇಸ್ ಅನ್ನು ಒಂದೇ ದೃಷ್ಟಿಕೋನದಲ್ಲಿ ನೋಡದೆ ರೇಸ್ ಕೌಶಲದ ಆಟವಾಗಿ ಪರಿಗಣಿಸಬೇಕು. ತೆರಿಗೆ ಕಡಿಮೆಗೊಳಿಸಬೇಕಿದೆ ಎಂದು ಇದೇ ವೇಳೆ ಅವರು ಸರ್ಕಾರಕ್ಕೆ ಮನವಿ ಮಾಡಿದರು

ಈ ವೇಳೆ ಕ್ಲಬ್‌ನ ಬಿ.ಯು.ಚಂಗಪ್ಪ, ಎಚ್.ಕೆ.ರಮೇಶ್, ಕೆ.ಎಂ.ಚಂದ್ರೇಗೌಡ, ಎನ್‌ಎಚ್‌ಎಸ್ ಮಣಿ, ಕೆ.ವಿ.ಪರೀಕ್ಷಿತ್, ಅಜಿತ್ ಕುಮಾರ್ ರಾಜೇ ಅರಸ್ ಮೊದಲಾದವರು ಇದ್ದು ಮಾಹಿತಿ ನೀಡಿದರು.


Spread the love