ಮೈಸೂರಿನಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ತೆರೆ

Spread the love

ಮೈಸೂರಿನಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ತೆರೆ

ಮೈಸೂರು: ನಗರದ ರಂಗಾಯಣದಲ್ಲಿ ಕಳೆದ ಎಂಟು ದಿನಗಳಿಂದ ನಡೆಯುತ್ತಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ರಂಗಾಯಣದ ಆವರಣದಲ್ಲಿರುವ ಬಿ.ವಿ.ಕಾರಂತರ ಪುತ್ಥಳಿ ಎದುರು ಕಲಾವಿದರು ತಾಯಿ ಭಾರತೀಯ ಪಾದ ಪದ್ಮಗಳಿಗೆ ನಮಿಸೋಣ ಬನ್ನಿ.. ಗೀತೆಯನ್ನು ಹಾಡುವುದರೊಂದಿಗೆ ಬಹುರೂಪಿಗೆ ತೆರೆ ಬಿದ್ದಿದೆ.

ಈ ಬಾರಿ ರಂಗಾಯಣ ಭಾರತೀಯತೆ ಶೀರ್ಷಿಕೆಯಡಿ ಸಂಘಟಿಸಿದ ಬಹುರೂಪಿ ರಂಗೋತ್ಸವದಲ್ಲಿ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಕೊಡವ ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿದದ್ದು, ನೆರೆದಿದ್ದವರು ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ದು ವಿಶೇಷವಾಗಿತ್ತು. ಮೂರು ನಾಟಕಗಳು ಕೊನೆಯ ದಿನ ಪ್ರದರ್ಶನಗೊಂಡಿತು.

ಬಿ.ವಿ.ಕಾರಂತ ರಂಗಚಾವಡಿಯಲ್ಲಿ ದಿವಾಕರ ಹೆಗಡೆ ತಂಡದವರು ತಾಳಮದ್ದಳೆಯಲ್ಲಿ ಸ್ವಾಮಿ ವಿವೇಕಾನಂದರು ಚಿಗಾಗೋ ಸರ್ವಧರ್ಮ ಸಮ್ಮೇಳನಕ್ಕೆ ಹೋಗುವ ಮುನ್ನ ಕನ್ಯಾಕುಮಾರಿ ಭೂಶಿರದಲ್ಲಿ ನಿಂತು ಸಂಕಲ್ಪ ಮಾಡಿದ ಸಂದರ್ಭವನ್ನು ಪ್ರಸ್ತುತಪಡಿಸಿದರೆ, ಭಾರತರಾಗೋಣ, ತಾಯಿ ಭಾರತಾಂಬೆ ನಿನಗೆ ಕೈ ಮುಗಿದು ಕೇಳುತ್ತಿದ್ದೇನೆ. ಬೆಂಬಲವಾಗು. ಪ್ರಪಂಚವನ್ನು ಎದುರಿಸಲು ಖಾವಿ ಬಟ್ಟೆ ಒಂದೇ ಸಾಕು. ಭಾರತ ಬೆಳಗಿಸುವುದಕ್ಕೆ ಹೊರಟಿದ್ದೇನೆ. ನಿನ್ನ ಅಭಯ ಬೇಕೆಂದು ವಿವೇಕಾನಂದರು ಪ್ರಾರ್ಥಿಸುವ ಸಂದರ್ಭವನ್ನು ದಿವಾಕರ ಹೆಗಡೆ ನುಡಿದರು. ಶ್ರೀರಾಮಕೃಷ್ಣರಿಗೆ ಶಾರದಾ ದೇವಿ ಅವರಿಗೆ ಜೈಕಾರ ಕೂಗುವ ಮೂಲಕ ತಾಳಮದ್ದಲೆ ಮುಕ್ತಾಯಗೊಂಡಿತು.

ವನರಂಗದಲ್ಲಿ ನಡೆದ ಮೈಸೂರಿನ ಕೆ.ಎನ್.ಮಹೇಶ್ ತಂಡದವರು ವೀರಗಾಸೆ ನೃತ್ಯ ಪ್ರದರ್ಶಿಸಿದರು. ತಮಟೆಯ ಸದ್ದಿಗೆ ಸುತ್ತಾಕಾರದಲ್ಲಿ ಕತ್ತಿ ಹಿಡಿದು ಬೀಸುತ್ತ ನರ್ತಿಸುತ್ತ ಸಭಿಕರಿಂದ ಪ್ರಶಂಸೆ ಪಡೆದರು. ರುದ್ರನ ಪ್ರಾರ್ಥಿಸಿದರು. ತೆಂಗಿನ ಕಾಯಿ ಒಡೆದು ಗಮನಸೆಳೆದರು. ಕೊಡಗಿನ ಸೂರಜ್ ತಂಡದವರು ಬೊಳಕಾಟ್ ನೃತ್ಯವನ್ನು ಪ್ರದರ್ಶಿಸಿದರು. ಕೊಡಗಿನಲ್ಲಿ ಆಚರಿಸುವ ಪುತ್ತರಿ ಹಬ್ಬದ ಸಂದರ್ಭದಲ್ಲಿ ನರ್ತಿಸುವ ಪುತ್ತರಿ ಕೋಲಾಟಕ್ಕೆ ರಂಗಾಸ್ತಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ರಾಷ್ಟ್ರೀಯ ಪಕ್ಷಿ ನವಿಲು ಮಾದರಿಯಲ್ಲಿ ಭಾರತದ ಧರ್ಮ ಸಮನ್ವಯತೆ ರಂಗಾಯಣಕ್ಕೆ ಆಗಮಿಸುವವರನ್ನು ಸ್ವಾಗತಿಸಿತು. ವಿವಿಧ ಪ್ರದೇಶಗಳ ಕಲಾವಿದರು ಪ್ರಸ್ತುತಪಡಿಸಿದ ಜನಪದ ಗಾಯನ, ನೃತ್ಯ ಕಲಾಸಕ್ತರನ್ನು ರಂಜಿಸಿದವು.

ಈ ಬಾರಿ ಬಹುರೂಪಿ ನಾಟಕೋತ್ಸವ ಮೂರು ರಂಗಮಂದಿರಗಳಲ್ಲಿ ನಡೆಯುವುದರೊಂದಿಗೆ 7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕಗಳು, ಕನ್ನಡದ 12 ನಾಟಕಗಳು ಮತ್ತು ತುಳು ನಾಟಕವು ಸೇರಿ ಒಟ್ಟು 20 ನಾಟಕಗಳು ಪ್ರದರ್ಶನಗೊಂಡಿದ್ದು ವಿಶೇಷವಾಗಿತ್ತು. ಒಟ್ಟಾರೆ ಅಕಾಲಿಕ ಮಳೆಯ ನಡುವೆಯೂ ಬಹುರೂಪಿ ನಾಟಕ ರಂಗಾಸಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಂತು ಸತ್ಯ.


Spread the love