
ಮೈಸೂರಿನಲ್ಲಿ ಮತ ಶಿಕಾರಿ ಮಾಡಿದ ಮೋದಿ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಗೋಧೋಳಿ ಸಮಯದಲ್ಲಿ ಅಬ್ಬರದ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮೈಸೂರು ಭಾಗದಲ್ಲಿ ಬಿಜೆಪಿಗೆ ಬೂಸ್ಟರ್ ನೀಡಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಶತಾಯಗತಾಯ ಅಧಿಕಾರಕ್ಕೆ ತರಲೇಬೇಕೆಂದು ಪಣತೊಟ್ಟಿರುವ ಪ್ರಧಾನಿ ಮೋದಿ 4 ಕಿ.ಮೀ ರೋಡ್ ಶೋ ನಡೆಸಿ ಮತ ಶಿಕಾರಿ ಮಾಡಿದರು. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು ಮೋದಿ ನಡೆಸಿದ ಪವರ್ ಶೋಗೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಬಲ ತುಂಬಿರುವ ಜತೆಗೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿಸಿತು. ಗನ್‌ಹೌಸ್ ಸರ್ಕಲ್‌ನಿಂದ ಆರಂಭವಾದ ಮೋದಿ ಶೋ, ಕಾಪೋರೇಷನ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದ ಸರ್ಕಲ್, ಮಿಲೀನಿಯಂ ಸರ್ಕಲ್‌ನಲ್ಲಿ ಸಾಗಿ ಅಂತ್ಯವಾಯಿತು. ಬಳಿಕ ಕಾರಿನಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ ದೆಹಲಿಗೆ ವಾಪಸ್ಸಾದರು. ಮೋದಿಯೊಂದಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ರಾಮದಾಸ್ ಇದ್ದರು.
ಸಂಜೆ 6ಗಂಟೆಗೆ ನಗರದ ಒವೆಲ್ ಮೈದಾನದಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಮೋದಿ, ರಾಧಾಕೃಷ್ಣನ್ ಅವೆನ್ಯೂ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ ಮೂಲಕ ಕಾರಿನಲ್ಲಿ ಬಿಗಿ ಭದ್ರತೆಯೊಂದಿಗೆ ರೋಡ್ ಶೋ ಆರಂಭ ಸ್ಥಳವಾದ ಗನ್‌ಹೌಸ್‌ಗೆ ಬಂದರು. ಮೋದಿ ಅವರನ್ನು ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಯುವಕ-ಯುವತಿಯರು ಸ್ವಾಗತಿಸಿದರು. ಬಳಿಕ ಮೋದಿ ಅವರಿಗೆ ವಿಶೇಷ ಉಡುಗೊರೆ ನೀಡಲಾಯಿತು. ನಂತರ ವಿಶೇಷ ವಾಹನವೇರಿದ ಮೋದಿ ರೋಡ್ ಶೋ ಆರಂಭಿಸಿದರು. ರಸ್ತೆಯ ಉದ್ದಕ್ಕೂ ನೆರೆದಿದ್ದ ಸಾವಿರಾರು ಮಂದಿ ತಮ್ಮ ನೆಚ್ಚಿನ ನಾಯಕನ ಮೇಲೆ ಹೂ ಮಳೆಗರೆದರು. ಜನರತ್ತ ಮೋದಿ ಕೈ ಬೀಸುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ, ಹರ್ಷೋದ್ಗಾರ ಮುಗಿಲುಮುಟ್ಟಿತ್ತು.
ಮೋದಿ ರೋಡ್ ಶೋ ಸಾಗಿದ ಮಾರ್ಗದ ಇಕ್ಕೆಲದಲ್ಲಿ ಬಿಜೆಪಿ ಬಾವುಟ ಬಾವುಟ ರಾರಾಜಿಸಿದ್ದಲ್ಲದೇ, ಇಡೀ ರಾಜಮಾರ್ಗ ಸಂಪೂರ್ಣ ಕೇಸರಿಮಯವಾಗಿ ಮಾರ್ಪಟ್ಟಿತ್ತು. ಬುಲೆಟ್ ಪ್ರೂಫ್ ವಾಹನದಲ್ಲಿ ಸುಮಾರು 4 ಕಿಮೀ ರೋಡ್ ಶೋ ನಡೆಸಿದ ನರೇಂದ್ರ ಮೋದಿಯವರನ್ನು ಕಂಡ ಜನಸಮೂಹ ಮೋದಿ ಮೋದಿ ಎಂಬ ಘೋಷಣೆ ಮೊಳಗಿಸಿತು. ಈ ವೇಳೆ ಬಿಜೆಪಿ ಪಾಳಯದಲ್ಲಿ ಸಂಭಮ ಮನೆ ಮಾಡಿತ್ತು.
ಮೋದಿಯವರ ರೋಡ್ ಶೋ ವೀಕ್ಷಿಸಲು ಆಗಮಿಸಿದ್ದ ಹಿರಿಯ ನಾಗರಿಕರಿಗೆ 5 ಸ್ಥಳಗಳಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿತ್ತು. ಕಾಡಾ ಕಚೇರಿ ಆವರಣ, ಡಿ.ಬನುಮಯ್ಯ ಕಾಲೇಜು ಬಳಿ, ಚಿಕ್ಕಗಡಿಯಾರ ವೃತ್ತ, ಹಳೇ ಆರ್‌ಎಂಸಿ ವೃತ್ತ ಹಾಗೂ ಹೈವೇ ಸರ್ಕಲ್ ಸೇರಿದಂತೆ ೫ ಕಡೆ ಹಿರಿಯ ನಾಗರೀಕರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು. ಎಸ್‌ಪಿಜಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರದ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ನಗರದ ಓವೆಲ್ ಮೈದಾನದ ಹೆಲಿಪ್ಯಾಡ್‌ಗೆ ಸಂಜೆ ಬಂದಿಳಿದ ಮೋದಿ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ ಮಾರ್ಗವಾಗಿ ಗನ್‌ಹೌಸ್ ವೃತ್ತಕ್ಕೆ ಆಗಮಿಸಿದರು. ಈ ವೇಳೆ ಅವರಿಗೆ ಮೈಸೂರಿನ ವೀಳ್ಯದೆಳೆ, ಶ್ರೀಗಂಧ, ಗಂಧದ ಕಡ್ಡಿ, ಮೈಸೂರು ರೇಷ್ಮೆ, ಮೈಸೂರು ಪಾಕ್, ಮಲ್ಲಿಗೆ ಹೂ ಉಡುಗೊರೆ ನೀಡಲಾಯಿತು.
ಜಿಲ್ಲೆಯ ವಿವಿಧ 25 ಕಲಾತಂಡಗಳು ರೋಡ್ ಶೋನಲ್ಲಿ ಭಾಗವಹಿಸಿ ಕಲಾ ಮೆರಗು ಹೆಚ್ಚಿಸಿದವು. ಜೆಎಸ್‌ಎಸ್ ಮಹಾವಿದ್ಯಾಪೀಠ ವೃತ್ತದಲ್ಲಿ ನಾದಸ್ವರ ಕಲಾತಂಡ ಹಾಗೂ ಪೂರ್ಣ ಕುಂಭ ಹೊತ್ತಿದ್ದ ಮಹಿಳೆಯರು ಗಮನ ಸೆಳೆದರು.
ದಸರಾ ಜಂಬೂಸವಾರಿ ಮಾರ್ಗದಲ್ಲಿ ರೋಡ್ ಶೋ ನಡೆಸಿದ ಮೋದಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಜನ ನೆರೆದಿದ್ದರು. ನಗರದ ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳ ಜನರಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಜನರು ಜಮಾಯಿಸಿದ್ದರು. ರಾಜಮಾರ್ಗದಲ್ಲಿ ಜಮಾಯಿಸಿದ ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಸಂಚಲನ ಮೂಡಿಸಿದರು.