ಮೈಸೂರಿನಲ್ಲಿ ಮಳೆಗಾಳಿಗೆ ಭಾರೀ ಹಾನಿ; ಸಿಡಿಲಿಗೆ ರೈತ ಬಲಿ

Spread the love

ಮೈಸೂರಿನಲ್ಲಿ ಮಳೆಗಾಳಿಗೆ ಭಾರೀ ಹಾನಿ; ಸಿಡಿಲಿಗೆ ರೈತ ಬಲಿ

ಮೈಸೂರು: ಭಾರೀ ಮಳೆಗೆ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾವು ನೋವು ಸಂಭವಿಸುವುದರೊಂದಿಗೆ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.

ಮೈಸೂರು ನಗರದಲ್ಲಿ ಗಾಳಿ ಮಳೆಗೆ ಎಲ್ಲೆಂದರಲ್ಲಿ ನೀರು ತುಂಬಿ ಹರಿದಿದ್ದು, ನಗರದ ವಿಷ್ಣುವರ್ಧನ ರಸ್ತೆಯಲ್ಲಿ ಮರ ಧರೆಗುರುಳಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಿರಂಗೂರು ಹರಳಹಳ್ಳಿ ಹೊನ್ನೇನಹಳ್ಳಿ ಬೀರನಹಳ್ಳಿ ಕೂಡ್ಲೂರು ಸೇರಿದಂತೆ ‌ಹಲವು ಗ್ರಾಮದಲ್ಲಿ ಸುರಿದ ಮಳೆಗೆ ತಗ್ಗು ಪ್ರದೇಶದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರೆ, ಗಾಳಿ ಸಹಿತ ಮಳೆಗೆ ಕೆಲವೆಡೆ ಬೆಳೆ ಹಾನಿಯಾಗಿದ್ದು, ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ.

ಹನಗೋಡು ಮುಖ್ಯ ರಸ್ತೆ ಕಿರಂಗೂರು ಪಾಲ ಪೆಂಜಹಳ್ಳಿ ಮುಖ್ಯ ರಸ್ತೆಯಲ್ಲಿ ಮರಗಳು ಅಡ್ಡಲಾಗಿ ಬಿದ್ದಿದ್ದು ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಹಳ್ಳಿಗಳ ತಗ್ಗು ಪ್ರದೇಶದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ಹತ್ತಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗಿದ್ದ ತಂಬಾಕು ಬೆಳೆ ಮತ್ತು ಶುಂಠಿ ಮತ್ತಿತರ ಜೋಳ ಬೆಳೆಗಳು ಕೊಚ್ಚಿ ಹೋಗಿವೆ. ಕಿರಂಗೂರ ಗ್ರಾಮದಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬ ಮರಿದು ಬಿದ್ದಿದ್ದು, ಆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಕಿರಂಗೂರು ಮಾದಹಳ್ಳಿ ಕೆರೆ ರಸ್ತೆಯಲ್ಲಿ ಮಂಡಿಯುದ್ದ ನೀರು ನಿಂತು ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿತ್ತು

ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ಸಿಡಿಲು ಬಡಿದು ಜಮೀನಿನಲ್ಲಿ ದನ ಮೇಯಿಸುತ್ತಿದ್ದ ರೈತ ಎ.ಎ ಲೋಕೇಶ್(55) ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಲಸ ಮಾಡುತ್ತಿದ್ದ ವೇಳೆ ಮಳೆ ಬಂದ ಕಾರಣ ಮರದ ಕೆಳಗೆ ಆಸರೆ ಪಡೆಯಲು ನಿಂತಿದ್ದ ಸಂದರ್ಭ ಬಡಿದ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮೃತರಿಗೆ ಪತ್ನಿ ಮೀನಾಕ್ಷಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ವಿಷಯ ತಿಳಿದು ಘಟನಾ ಸ್ಥಳಕ್ಕೆ ಉಪ ತಹಶೀಲ್ದಾರ್ ಮಹೇಶ್ ಹಾಗೂ ಸಿಬ್ಬಂದಿ ಮತ್ತು ಬೈಲಕುಪ್ಪೆ ಆರಕ್ಷಕ ಠಾಣೆ ಸಬ್ ಇನ್ಸ್ಪೆಕ್ಟರ್ ಬಸವರಾಜು, ಎಎಸ್ಐ ತಿಮ್ಮರಾಜ್ ನಾಯಕ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಮೃತರ ಪತ್ನಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love

Leave a Reply

Please enter your comment!
Please enter your name here