ಮೈಸೂರಿನಲ್ಲಿ ಮಹಿಳೆಯರಿಗಾಗಿಯೇ ಪಿಂಕ್ ಶೌಚಾಲಯ ನಿರ್ಮಾಣ

Spread the love

ಮೈಸೂರಿನಲ್ಲಿ ಮಹಿಳೆಯರಿಗಾಗಿಯೇ ಪಿಂಕ್ ಶೌಚಾಲಯ ನಿರ್ಮಾಣ

ಮೈಸೂರು: ಮೈಸೂರಿನಲ್ಲಿ ಪಾರಂಪರಿಕ ಶೌಚಾಲಯ ಉದ್ಘಾಟನೆ ಬೆನ್ನಲ್ಲೇ ಮಹಿಳೆಯರಿಗಾಗಿ ವಿಶೇಷ ಪಿಂಕ್ ಶೌಚಾಲಯವನ್ನು ನಿರ್ಮಿಸಲಾಗಿದೆ. ಈ ಶೌಚಾಲಯವನ್ನು ಮಹಿಳೆಯರಿಗಾಗಿ ನಿರ್ಮಿಸಲಾಗಿದ್ದು, ನಿರ್ವಹಣೆ ಮಹಿಳೆಯರದ್ದೇ ಆಗಿದೆ. ಈ ಶೌಚಾಲಯದಲ್ಲಿ ಡ್ರೆಸ್ಸಿಂಗ್ ರೂಂ, ಸ್ನಾನದ ಮನೆಯೂ ಇದ್ದು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದ್ದು, ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ.

ಮೈಸೂರಿನ ಅರಸು ರಸ್ತೆಯಲ್ಲಿರುವ ಡಾ.ಅಂಬೇಡ್ಕರ್ ಭವನದ ಮುಂಭಾಗ ಪಾಲಿಕೆಯ ಅನುದಾನದಲ್ಲಿ ನಿರ್ಮಿಸಲಾದ ಪಿಂಕ್ ಶೌಚಾಲಯವನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿ, ಮಾತನಾಡಿ, ಮೈಸೂರಿನಲ್ಲಿ ಮಹಿಳೆಯರಿಗೆ ವಿಶೇಷವಾಗಿ ಏನನ್ನಾದರೂ ಮಾಡಬೇಕೆಂಬ ಉದ್ದೇಶದಿಂದ ಪಿಂಕ್ ಟಾಯ್ಲೆಟ್ ನಿರ್ಮಿಸಲಾಗಿದೆ. ಮಹಿಳೆಯರು ಮಾತ್ರ ಈ ಶೌಚಾಲಯವನ್ನು ಬಳಸಬಹುದು. ನಿರ್ವಹಣೆ ಮಾಡುವವರೂ ಮಹಿಳೆಯರು, ವಿಶೇಷವಾಗಿ ಅಂಗವಿಕಲರಿಗೆ ಕುಳಿತುಕೊಳ್ಳಲು ಡ್ರೆಸ್ಸಿಂಗ್ ರೂಂ, ವಿಶ್ರಾಂತಿಗೃಹಗಳನ್ನು ವಿಶೇಷ ರೀತಿಯಲ್ಲಿ ರೂಪಿಸಿ ಮಹಾನಗರ ಪಾಲಿಕೆಯ ಅನುದಾನದಲ್ಲಿ ಸರ್ಕಾರದಿಂದ ಜಾಗವನ್ನು ಪಡೆದು ಪಾಲಿಕೆಗೆ ಹಸ್ತಾಂತರಿಸಿ ನಿರ್ಮಿಸಲಾಗಿದೆ ಎಂದು ಹೇಳಿದರು.

ನಗರದ ಅರಸು ರಸ್ತೆಯಲ್ಲಿ ನೂರೈವತ್ತೂ ಮಳಿಗೆಗಳಿವೆ. ಅಲ್ಲಿ ಸಾಕಷ್ಟು ಹೆಣ್ಣು ಮಕ್ಕಳು ಕೆಲಸಕ್ಕೆ ಬರುತ್ತಾರೆ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಇರಬೇಕು. ಅವರಿಗೂ ಇದರಿಂದ ಅನುಕೂಲವಾಗಲಿದೆ. ಹೊರಗಡೆಯಿಂದ ಬಂದವರು ರೈಲ್ವೆ ಸ್ಟೇಷನ್ ನಿಂದ ಬಂದರೆ ಸ್ನಾನವನ್ನು ಸಹ ಮಾಡಬಹುದಾದ ವ್ಯವಸ್ಥೆಗಳಿವೆ. ಇವೆಲ್ಲ ಮಹಿಳೆಯರಿಗೋಸ್ಕರವಾಗಿಯೇ ಮಾಡಿದ್ದು. ಕರ್ನಾಟಕದಲ್ಲಿ ಮಹಿಳೆಯರಿಗಾಗಿ ಮಾಡಿದ ಮೊದಲನೆ ಪಿಂಕ್ ಟಾಯ್ಲೆಟ್ ಇದಾಗಿದೆ. ದಕ್ಷಿಣ ಭಾರತದಲ್ಲೇ ಮೊದಲನೆಯದು ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದರು.

ಈ ಸಂದರ್ಭ ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪ, ಪಾಲಿಕೆಯ ಸದಸ್ಯೆ ಪ್ರಮೀಳಾ ಭರತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love