ಮೈಸೂರಿನಲ್ಲಿ ಮೇಳೈಸಿದ ಸಾಂಸ್ಕೃತಿಕ ವೈಭವ

Spread the love

ಮೈಸೂರಿನಲ್ಲಿ ಮೇಳೈಸಿದ ಸಾಂಸ್ಕೃತಿಕ ವೈಭವ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಗಮಗಿಸುವ ವಿದ್ಯುತ್ ದೀಪಾಲಂಕಾರದ ನಡುವೆ ಅರಮನೆಯ ಮುಂಭಾಗದ ಭವ್ಯ ವೇದಿಕೆಯಲ್ಲಿ ಚಾಲನೆ ದೊರೆತಿದೆ

ಇದೇ ವೇಳೆ ಅರಮನೆ ಮುಂಭಾಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥ್ ಮಲ್ಕಾಪುರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೊದಲಾದವರು ಶಾಸ್ತ್ರೀಯ ಸಂಗೀತ ಗಾಯಕಿ ಲಲಿತ್ ಜೆ.ರಾವ್ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವೇಳೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಮಾಜದಲ್ಲಿ ನಕ್ಸಲವಾದ, ಉಗ್ರವಾದ ತಲೆಎತ್ತುತ್ತಿದೆ. ಈ ಕುರಿತು ಯುವ ಜನರು ಜಾಗೃತವಾಗಬೇಕು. ಪಾಕಿಸ್ತಾನ ಸೇರಿದಂತೆ ಇನ್ನಿತರ ನೆರೆದೇಶಗಳಲ್ಲಿರುವ ದುಷ್ಟಶಕ್ತಿ ಕುರಿತು ಸೈನಿಕರು ನೋಡಿಕೊಳ್ಳುತ್ತಾರೆ. ಆದರೆ, ನಮ್ಮ ಮಧ್ಯೆಯೇ ಅನೇಕ ದುಷ್ಟಶಕ್ತಿಗಳು ಇವೆ. ಅದು ಹಿಂದೂಗಳ ನಂಬಿಕೆಯಾದ ಪವಿತ್ರ ಶ್ರೀರಾಮ, ಗೋವು ಇನ್ನಿತರ ನಮ್ಮ ಸಂಸ್ಕೃತಿ, ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿದೆ. ಅದನ್ನು ಸದೆಬಡಿಯುವ ಕೆಲಸವಾಗಬೇಕು ಎಂದು ಕರೆಕೊಟ್ಟರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗವೂ ಮೌಲ್ಯ ಕಳೆದುಕೊಂಡಿದೆ. ಈ ವಿಷವರ್ತುಲದಿಂದ ಹೊರ ಬಂದು ಇದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕಿದೆ. ಅದಕ್ಕಾಗಿ ಆದರ್ಶಯುತ ಸಮಾಜ ನಿರ್ಮಾಣದ ಕಡೆಗೆ ನಾವುಗಳು ಕಾರ್ಯೋನ್ಮುಖವಾಗಬೇಕಿದೆ ಎಂದರು.

ಜಾನಪದ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಮೂಲಕ ಮುಂದಿನ ಪೀಳಿಗೆ ಹಸ್ತಾಂತರಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.

ದೇಶದ ಪ್ರತಿ ಮನೆ ಮನೆಗಳ ಮೇಲೆಯೂ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವ ಬೀರುತ್ತಿದೆ. ವೇಷಭೂಷಣ, ಆಹಾರ ಇನ್ನಿತರ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೇರೂರಿದೆ. ಈ ಕುರಿತು ಅರಿತುಕೊಂಡು ಪರಕೀಯ ಸಂಸ್ಕೃತಿಯಿಂದ ದೂರ ಇರಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಮೈಲ್ಯಾಕ್ ಅಧ್ಯಕ್ಷ ಕೌಟಿಲ್ಯ ರಘು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ಹಲವರು ಭಾಗವಹಿಸಿದ್ದರು.


Spread the love