ಮೈಸೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ ಹುನಾರ್ ಹಾಟ್ ಬೆಳ್ಳಿಹಬ್ಬ

Spread the love

ಮೈಸೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡ ಹುನಾರ್ ಹಾಟ್ ಬೆಳ್ಳಿಹಬ್ಬ

ಮೈಸೂರು: ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಯುಎಸ್‍ಟಿಟಿಎಡಿ ಯೋಜನೆಯಡಿ ಆಯೋಜಿಸುವ ಪ್ರಮುಖ ಕಾರ್ಯಕ್ರಮ ಹುನಾರ್ ಹಾಟ್‍ನ ಬೆಳ್ಳಿಹಬ್ಬದ ಆವೃತ್ತಿಯನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 2021ರ ಫೆಬ್ರುವರಿ 6ರಿಂದ 14ರವರೆಗೆ ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಾ.ಸದಾನಂದ ಗೌಡ ಅವರು ಫೆಬ್ರುವರಿ 6ರಂದು ಉದ್ಘಾಟಿಸಿದರು. ಸಂಸದ ಪ್ರತಾಪ್ ಸಿಂಹ, ಕರ್ನಾಟಕದ ಯುವ ಸಬಲೀಕರಣ, ಕ್ರೀಡೆ ಮತ್ತು ಯೋಜನಾ ಖಾತೆ ಸಚಿವ ಕೆ.ಸಿ.ನಾರಾಯಣ ಗೌಡ, ಕರ್ನಾಟಕ ವಿಧಾನಸಭೆ ಸದಸ್ಯ ಎನ್.ನಾಗೇಂದ್ರ ಅವರು ಭಾಗವಹಿಸಿದ್ದರು.

ಈ ವಿಶಿಷ್ಟ ಕಾರ್ಯಕ್ರಮಕ್ಕೆ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದರು, ಸ್ಥಳಕ್ಕೆ ಭೇಟಿ ನೀಡಿದ್ದ ಪ್ರತಿಯೊಬ್ಬರೂ ತೀರಾ ಸಂತಸಗೊಂಡರು ಹಾಗೂ ಇಡೀ ವಾತಾವರಣ ಹಾಗೂ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂಥ ಕಾರ್ಯಕ್ರಮ ಮೈಸೂರಿನಲ್ಲಿ ಹಿಂದೆಂದೂ ಆಯೋಜನೆಯಾಗಿರಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರು. ಇಡೀ ಕಾರ್ಯಕ್ರಮ ಸ್ಥಳದ ವಾತಾವರಣವು ಕರ್ನಾಟಕದ ಜನತೆಯ ಸಂಸ್ಕೃತಿಗಳ ವಿವಿಧ ಮಜಲುಗಳಿಂದ ಪ್ರೇರಿತವಾಗಿದ್ದವು. ಪ್ರವೇಶದ್ವಾರವು ಮೈಸೂರು ಅರಮನೆಯಿಂದ ಸ್ಫೂರ್ತಿ ಪಡೆದಿತ್ತು. ಕಾರ್ಯಕ್ರಮ ಸ್ಥಳದಲ್ಲಿ ಹಲವು ಸೆಲ್ಫಿ ಪಾಯಿಂಟ್‍ಗಳನ್ನು ಅಳವಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾರ್ವಜನಿಕರು ಹಲವು ಕಡೆಗಳಲ್ಲಿ ಅಸಂಖ್ಯಾತ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು. ದೇಶದ ವಿವಿಢೆಗಳ ಖಾದ್ಯಗಳನ್ನು ಪರಿಚಯಿಸುವ ಆಹಾರ ಮಳಿಗೆಗಳು ಇದ್ದವು. ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಪಾಕತಜ್ಞರು ಹಾಗೂ ನಿಪುಣರಿಂದ ಬಾಯಲ್ಲಿ ನೀರೂರಿಸುವ ಖಾದ್ಯಗಳು ತಯಾರಾದವು. ದೊಡ್ಡ ಪ್ರಮಾಣದಲ್ಲಿ ವೈವಿಧ್ಯಮಯ ಕಲಾತ್ಮಕ ವಸ್ತುಗಳು ಕಾರ್ಯಕ್ರಮದಲ್ಲಿ ಲಭ್ಯವಿದ್ದವು. ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಕುಶಲಕರ್ಮಿಗಳು ಸ್ಥಳದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು. ಪ್ರತಿ ದಿನ ಒಂದು ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಕಲಾಕೃತಿಗಳು ಮಾರಾಟವಾಗಿವೆ ಎಂದು ಹಲವು ಮಂದಿ ಕುಶಲಕರ್ಮಿಗಳು ಸಂತಸ ವ್ಯಕ್ತಪಡಿಸಿದರು. ಕೋವಿಡ್-19 ಕಾರಣದಿಂದ ವಹಿವಾಟಿಗೆ ಧಕ್ಕೆಯಾಗಿದ್ದ ಕುಶಲಕರ್ಮಿಗಳಿಗೆ ಇಡೀ ಕಾರ್ಯಕ್ರಮ ನಿರಾಳವಾಗುವಂತೆ ಮಾಡಿತು.

ಈ ಕಾರ್ಯಕ್ರಮವನ್ನು ಭೀಕರ ಸಾಂಕ್ರಾಮಿಕದ ನಡುವೆಯೇ ಆಯೋಜಿಸಲಾಗಿತ್ತು. ಆದ್ದರಿಂದ ಕೋವಿಡ್-19 ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಸ್ಪರ್ಶರಹಿತ ಹ್ಯಾಂಡ್ ಸ್ಯಾನಿಟೈಸರ್ ಯಂತ್ರಗಳನ್ನು ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಅಳವಡಿಸಲಾಗಿತ್ತು. ಮಾಸ್ಕ್ ಧರಿಸದ ವ್ಯಕ್ತಿಗಳು ಒಳಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಎಲ್ಲ ಮಳಿಗೆಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇಡಲಾಗಿತ್ತು. ಕೋವಿಡ್-19 ಜಾಗೃತಿಗಳನ್ನು ಸ್ಟಿಕ್ಕರ್‍ಗಳ ಮೂಲಕ ಎಲ್ಲೆಡೆ ಪ್ರದರ್ಶಿಸಲಾಗಿತ್ತು. ಕೋವಿಡ್-19 ಶಿಷ್ಟಾಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಆಡಿಯೊ ಮತ್ತು ವಿಡಿಯೊಗಳನ್ನು ಸಮಾರಂಭದ ಸ್ಥಳದಲ್ಲಿ ಪ್ರಸಾರ ಮಾಡಲಾಗುತ್ತಿತ್ತು.

ಒಟ್ಟಾರೆಯಾಗಿ ಈ ಕಾರ್ಯಕ್ರಮ ಅದ್ಭುತ ಯಶಸ್ಸನ್ನು ಕಂಡಿದ್ದು, ಜನರಿಂದ ತುಂಬಿ ತುಳುಕುತ್ತಿತ್ತು. ಕಾರ್ಯಕ್ರಮದ ದಿನಗಳುದ್ದಕ್ಕೂ ಜನ ಭಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಹಲವು ಮಂದಿ ರಾಜಧಾನಿ ಬೆಂಗಳೂರಿನಿಂದ ಮೈಸೂರಿನ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಮತ್ತು ಹುನಾರ್ ಹಾಟ್‍ಗೆ ಭೇಟಿ ನೀಡುವ ಸಲುವಾಗಿಯೇ ವಾರಾಂತ್ಯವನ್ನು ಯೋಜಿಸಿಕೊಂಡು ಆಗಮಿಸಿದ್ದಾಗಿ ಹಲವು ಮಂದಿ ಹೇಳಿದರು.

ಹುನಾರ್ ಹಾಟ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಂಡಕ್ಕೆ ಈ ಅಪೂರ್ವ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಿದ್ದಕ್ಕಾಗಿ ಅಭಿನಂದನೆಗಳು. ಹುನಾರ್ ಹಾಟ್‍ನ 26ನೇ ಆವೃತ್ತಿಯನ್ನು 2021ರ ಫೆಬ್ರುವರಿ 21ರಿಂದ 2021ರ ಮಾರ್ಚ್ 2ರವರೆಗೆ ನವದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ.


Spread the love