ಮೈಸೂರಿನಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ

Spread the love

ಮೈಸೂರಿನಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ

ಮೈಸೂರು: ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯುವ ಮೂಲಕ ರೌಡಿಶೀಟರ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರಾಗಿ ರಮೇಶ್ ಬಾನೋತ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ನಗರದಲ್ಲಿ ರೌಡಿಗಳ ಹಾವಳಿ ಮಟ್ಟಹಾಕಬೇಕು ಎಂಬ ನಿರ್ಧಾರಕ್ಕೆ ಬಂದಿದ್ದು, ರೌಡಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ತಮ್ಮ ಸಿಬ್ಬಂದಿಗಳೊಂದಿಗೆ ನಗರದ ಹೆಬ್ಬಾಳು, ಅಗ್ರಹಾರ, ಕುವೆಂಪುನಗರ, ಎನ್‌ಆರ್ ಮೊಹಲ್ಲಾ, ಮಂಡಿ ಮೊಹಲ್ಲಾ, ನಜರಬಾದ್ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಮುಂಜಾನೆಯ ಸುಖ ನಿದ್ದೆಯಲ್ಲಿದ್ದ ರೌಡಿಗಳನ್ನು ಆಯುಕ್ತರ ತಂಡ ಬಡಿದೆಬ್ಬಿಸಿದೆ. ನಿದ್ದೆಯ ಮಂಪರಿನಲ್ಲಿಯೇ ಪೊಲೀಸರನ್ನು ಕಂಡ ರೌಡಿಗಳು ಬೆಚ್ಚಿಬಿದ್ದಿದ್ದಾರೆ. ಅವರ ಮನೆಯವರಿಗೂ ಏನಾಗುತ್ತಿದೆ ಎಂಬುದು ಗೊತ್ತಾಗದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನಗರದಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 970 ಮಂದಿ ರೌಡಿಗಳ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ. ಇದೀಗ ರೌಡಿ ಚಟುವಟಿಕೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂಬ ಮಾಹಿತಿಯನ್ವಯ 37 ಮನೆಯ ಮೇಲೆ ದಾಳಿ ನಡೆಸಿ 37ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಇದೇ ವೇಳೆ ರೌಡಿಗಳ ಮನೆಯನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಕಾಳಪ್ಪ ಎಂಬಾತನ ಮನೆಯಲ್ಲಿ ಮೂರು ಹಾಗೂ ಸಲೀಂ ಎಂಬಾತನ ಮನೆಯಲ್ಲಿ ಎರಡು ಚಾಕುಗಳು ಹಾಗೂ ಇನ್ನಿತರ ಮಾರಕಾಸ್ತ್ರಗಳು ದೊರಕಿವೆ. ಇದೇ ವೇಳೆ 37 ಮಂದಿಯನ್ನೂ ವಿಚಾರಣೆಗೊಳಪಡಿಸಿದ ಪೊಲೀಸರು, ನಿಮ್ಮ ಮೇಲೆ ಸಾಕಷ್ಟು ದೂರುಗಳು ಬಂದಿವೆ. ಜನರನ್ನು ಹೆದರಿಸಿ, ಬೆದರಿಸಿ ಜೀವನ ಮಾಡಿಕೊಂಡಿರಬಹುದು ಎಂದರೆ ಅದು ಸಾಧ್ಯವಿಲ್ಲ. ರೌಡಿಸಂ ಬಿಟ್ಟು ಒಳ್ಳೆಯ ಜೀವನ ನಡೆಸಿದಲ್ಲಿ ನಮ್ಮಿಂದ ನಿಮಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿ ಹೇಳಿದ್ದಾರೆ.

ನಗರದಾದ್ಯಂತ ಅನಧಿಕೃತವಾಗಿ ಕ್ಲಬ್ ಹಾಗೂ ಕ್ಯಾಸಿನೋಗಳನ್ನು ನಡೆಸಲಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಒಂದು ಕ್ಯಾಸಿನೋ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. ಅನಧಿಕೃತ ಕ್ಲಬ್ ಮೇಲೂ ದಾಳಿ ನಡೆಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಎಚ್ಚರಿಕೆ ನೀಡಿದ್ದಾರೆ. ದಾಳಿ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರದೀಪ್‌ಗುಂಟಿ, ಆಯಾ ವಿಭಾಗದ ಎಸಿಪಿ, ಇನ್‌ಸ್ಪೆಕ್ಟರ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love