
ಮೈಸೂರಿನಲ್ಲಿ ರೌಡಿಶೀಟರ್ ಮನೆಗಳ ಮೇಲೆ ದಾಳಿ
ಮೈಸೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ನಗರದ ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಲ್ಲದೆ ಹೆಬ್ಬಾಳು ಪೊಲೀಸ್ ಠಾಣೆ ಬಳಿ ರೌಡಿ ಶೀಟರ್ ಗಳ ಪರೇಡ್ ನಡೆಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರ ಪೊಲೀಸರು ರೌಡಿ ಶೀಟರ್‌ಗಳಿಗೆ ಚಳಿ ಬಿಡಿಸಿದ್ದು, ಮೈಸೂರಿನ ಹಲವು ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಯಾವುದೇ ಮಾರಕಾಸ್ತ್ರಗಳ ಪತ್ತೆಯಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ರೌಡಿ ಶೀಟರ್ ಗಳ ಪರೇಡ್ ನಡೆಸಿದರು. ಮೈಸೂರಿನ ರೌಡಿ ಶೀಟರ್ ಗಳಿಗೆ ಡ್ರಿಲ್ ಮಾಡಿರುವ ಪೊಲೀಸರು ಸುಮಾರು 76ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಹೆಬ್ಬಾಳು ಪೊಲೀಸ್ ಠಾಣೆಗೆ ಕರೆಸಿ ಚುನಾವಣೆ ಸಮಯದಲ್ಲಿ ಅಹಿತಕರ ಘಟನೆಗೆ ಆಸ್ಪದ ನೀಡಿದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಪೆರೇಡ್‌ನಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್‌ಗಳಿಗೆ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದರು. ಯಾರೂ ಬಾಲ ಬಿಚ್ಚಬಾರದು. ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೆ ಮೈಸೂರಿನಿಂದ ಗಡಿಪಾರು ಮಾಡುತ್ತೇನೆ ಎಂದು ಎಚ್ಚರಿಸಿದರು.
ಡಿಸಿಪಿಗಳಾದ ಮುತ್ತುರಾಜ್, ಜಾನವಿ, ವಿವಿಧ ವಿಭಾಗಗಳ ಎಸಿಪಿಗಳು ಹಾಗೂ ಮೈಸೂರು ನಗರ ಎಲ್ಲ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಾಗೂ ಸಬ್‌ಇನ್ಸ್‌ಪೆಕ್ಟರ್‌ಗಳು ಹಾಜರಿದ್ದರು.