ಮೈಸೂರಿನಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೆ ವಿರೋಧ

Spread the love

ಮೈಸೂರಿನಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೆ ವಿರೋಧ

ಮೈಸೂರು: ರಾಜ್ಯ ಸರ್ಕಾರ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮೈಸೂರು ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿರುವುದಕ್ಕೆ ವರ್ತಕರು, ಹೋಟೆಲ್ ಮಾಲೀಕರು ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿದ್ದು, ಕೂಡಲೇ ಆದೇಶ ಹಿಂಪಡೆಯುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿವೆ.

ಜಿಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ವೇಳೆಗೆ ಕೊರೊನಾ ೩ನೇ ಅಲೆ ಭೀತಿಯಿಂದ ಮತ್ತೆ ವಾರಾಂತ್ಯದ ಲಾಕ್‌ಡೌನ್ ಮತ್ತು ನೈಟ್ ಕಫ ಜಾರಿಯಾಗಿದೆ. ಇದಕ್ಕೆ ಸಹಜವಾಗಿಯೇ ಶನಿವಾರ ಬೆಳಗ್ಗೆ ಎಂದಿನಂತೆ ವಾಹನ ಸಂಚಾರ ಕಂಡುಬಂದರೂ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ವಾಹನ ಸಂಚಾರ ಕಡಿಮೆಯಾಯಿತಲ್ಲದೇ, ವರ್ತಕರು ಅಗತ್ಯ ವಸ್ತುಗಳ ವ್ಯಾಪಾರ ಹಾಗೂ ವಾಣಿಜ್ಯ ವಹಿವಾಟನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಮನೆಯತ್ತ ಸಾಗಿದರು.

ವಾರಾಂತ್ಯ ಕರ್ಫ್ಯೂ ಜಾರಿ ಹಿನ್ನೆಲೆ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಮದ್ಯ ಮಾರಾಟ ಸೇರಿದಂತೆ ಹಣ್ಣು-ತರಕಾರಿ ಹಾಗೂ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ನಗರದ ಎಲ್ಲೆಡೆ ವಾಹನ ಸಂಚಾರ ಕಂಡುಬಂದಿತು. ಅಗತ್ಯ ವಸ್ತುಗಳ ಹೊರತು ಪಡಿಸಿದಂತೆ ಇತರೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದ ಹಿನ್ನೆಲೆ ಪ್ರಮುಖ ವಾಣಿಜ್ಯ ಕೇಂದ್ರಗಳು ಜನರಿಲ್ಲದೆ ಬಿಕೊ ಎನ್ನುತ್ತಿದ್ದವು.

ವೀಕೆಂಡ್ ಕಫ ಹಿನ್ನೆಲೆ ಮೈಸೂರು ನಗರ ಮತ್ತು ಗ್ರಾಮಾಂತರ ಸಾರಿಗೆಯಿಂದ ಬಸ್ ಸಂಚಾರವನ್ನು ಅರ್ಧದಷ್ಟು ಕಡಿತಗೊಳಿಸಲಾಗಿತ್ತು. ಲಾಕ್‌ಡೌನ್ ತೆರವು ಮಾಡಿದ್ದ ನಂತರ ಮೈಸೂರು ನಗರ ಸಾರಿಗೆಯಿಂದ ನಿತ್ಯ 300 ಬಸ್‌ಗಳು ಸಂಚಾರ ನಡೆಸುತ್ತಿದ್ದವು. ಆದರೆ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶನಿವಾರ ನಗರದ ವಿವಿಧೆಡೆ 130 ಬಸ್‌ಗಳು ಮಾತ್ರ ಸಂಚಾರ ನಡೆಸಿದವು. ಹಾಗೆಯೇ, ಮೈಸೂರು ಗ್ರಾಮಾಂತರ ಸಾರಿಗೆಯಲ್ಲಿ ನಿತ್ಯ 380ಕ್ಕೂ ಹೆಚ್ಚು ಬಸ್‌ಗಳು ಕಾರ್ಯಾಚರಿಸುತ್ತಿದ್ದವು. ಶನಿವಾರ 170 ಬಸ್‌ಗಳು ಮೈಸೂರು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಗೆ ಸಂಚಾರ ನಡೆಸಿದವು.

ಸರ್ಕಾರಿ ಕಚೇರಿಗಳು, ಕೈಗಾರಿಕೆ, ಕಂಪನಿಗಳು, ಹೋಟೆಲ್ ಹಾಗೂ ತುರ್ತು ಮತ್ತು ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಇದರಿಂದ ಸಹಜವಾಗಿಯೇ ನಗರದಲ್ಲಿ ವಾಹನ ಓಡಾಟ ಕಂಡುಬಂದಿತು.

ವಾರಾಂತ್ಯ ಕಫ ಜಾರಿಯಾದ ಹಿನ್ನೆಲೆ ನಗರದ ಮೃಗಾಲಯ, ಅರಮನೆ, ಚಾಮುಂಡಿ ಬೆಟ್ಟ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ ಹಾಗೂ ಅರಣ್ಯ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಲಾಗಿತ್ತು. ಪರಿಣಾಮ ನಗರದಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತ್ತು.

ಹಾಗೆಯೇ ಹೋಟೆಲ್ ಮತ್ತು ರೆಸ್ಟೋರೆಂಟ್ ದಿನವಿಡೀ ಕಾರ್ಯ ನಿರ್ವಹಿಸಿದರೂ ಪಾರ್ಸೆಲ್ ಮತ್ತು ಹೋಂ ಡೆಲಿವರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು.


Spread the love