ಮೈಸೂರಿನಲ್ಲಿ ಸರಗಳ್ಳರ ಹಾವಳಿ: ಮಹಿಳೆಯರೇ ಎಚ್ಚರ!

Spread the love

ಮೈಸೂರಿನಲ್ಲಿ ಸರಗಳ್ಳರ ಹಾವಳಿ: ಮಹಿಳೆಯರೇ ಎಚ್ಚರ!

ಮೈಸೂರು: ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧಾರ ಮಾಡಿದ ಬೆನ್ನಲ್ಲೇ ಸರಗಳ್ಳರು ತಮ್ಮ ಕೈಚಳಕ ತೋರಲು ಮುಂದಾಗಿದ್ದು ಜನಜಂಗುಳಿ, ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಎಗರಿಸಿ ಪರಾರಿಯಾಗುತ್ತಿದ್ದಾರೆ.

ಇದೀಗ ಒಂದೇ ದಿನದಲ್ಲಿ ನಗರದ ಹಲವು ಕಡೆ ಸರಗಳ್ಳತನವಾಗಿರುವುದು ಮೈಸೂರ ಜನರಲ್ಲಿ ಬೆಚ್ಚಿ ಬೀಳುವಂತೆ ಮಾಡಿದೆ. ಸರಣಿ ಕಳ್ಳತನದ ಬಗ್ಗೆ ಭಯ ಶುರುವಾಗಿದ್ದು, ದಸರಾ ಹಿನ್ನಲೆಯಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರಲು ಮುಂದಾಗಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದರೆ, ಜನ ಭಯಪಡುವಂತಾಗಿದೆ.

ನಗರದಲ್ಲಿ ಕೇವಲ ಎರಡುವರೆ ಗಂಟೆ ಅವಧಿಯಲ್ಲಿ ಮೂರು ಕಡೆ ಸರಗಳ್ಳತನ ನಡೆಸಿ, ಒಂದು ಕಡೆ ವಿಫಲ ರಾಗಿರುವುದು ಕಂಡು ಬಂದಿದೆ. ನಗರದ ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಕೂಟರ್ ನಲ್ಲಿ ಬಂದ ಇಬ್ಬರು ಸರಗಳ್ಳರು ನಾಯ್ಡು ನಗರದ ಮುಖ್ಯ ರಸ್ತೆಯ ಫುಡ್ ಸ್ಟ್ರೀಟ್ ವೃದ್ದೆ ಗಿರಿಜಮ್ಮ(72) ಅವರು ಸಂಜೆ 7 ಗಂಟೆ ಸಮಯದಲ್ಲಿ ಗೋಬಿ ತಿನ್ನುವಾಗ 30 ಗ್ರಾಂ ಚಿನ್ನ ಸರವನ್ನು ಸ್ಕೂಟರ್ ಹಿಂಬದಿ ಸವಾರ ಸರ ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಎನ್. ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿ.ವಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿ ಮೊಹಲ್ಲಾದ 8 ನೇ ಕ್ರಾಸ್ ನಲ್ಲಿ ಗೋಕುಲಂ ನಿವಾಸಿ ಸುಜಾತ (55) ಎಂಬವರ ಸರವನ್ನು ಅವರು ರಾತ್ರಿ 9 ಗಂಟೆ ಸಮಯದಲ್ಲಿ ಅಂಗಡಿಯಿಂದ ಸಾಮಾನುಗಳನ್ನು ಕೊಂಡು ಹಿಂತಿರುಗುವಾಗ ಬೈಕಿನಲ್ಲಿ ಬಂದ ಖದೀಮರು ಅವರ ಬಳಿಯಿದ್ದ 20 ಗ್ರಾಂ ಸರವನ್ನು ಕಸಿದು ಪರಾರಿಯಾಗಿದ್ದಾರೆ ಈ ಸಂಬಂಧ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಕೂಟರ್‌ನಲ್ಲಿ ಬಂದ ಸರಗಳ್ಳರು ಸರಸ್ವತಿಪುರಂ ಮೂರನೇ ಮೇನ್ ನಿವಾಸಿ ಮಾಲತಿ (38) ಅವರು ಸರಸ್ವತಿಪುರಂನಲ್ಲಿ ತೆರಳುತ್ತಿದ್ದ ವೇಳೆ ರಾತ್ರಿ 9.30 ರ ಸಮಯದಲ್ಲಿ ಅವರ ಕೊರಳಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯನಗರದ ಎರಡನೇ ಹಂತದಲ್ಲಿ ರಾತ್ರಿ 8.30ರ ಸಮಯದಲ್ಲಿ ವನಮಾಲ ಅವರು ತೆರಳುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಸರಗಳ್ಳರು ಅವರ ಕೊರಳಿಗೆ ಕೈ ಹಾಕಿದ್ದು, ಅವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ಸಹಾಯಕ್ಕೆ ಕೂಗಿದಾಗ ಗಾಬರಿಕೊಂಡ ಸರಗಳ್ಳರು ಪರಾರಿಯಾಗಿದ್ದಾರೆ.

ಒಟ್ಟಾರೆ ಮೇಲಿಂದ ಮೇಲೆ ನಗರದಲ್ಲಿ ನಡೆದ ಸರಗಳ್ಳತನ ಪ್ರಕರಣ ಭಯ ಹುಟ್ಟಿಸಿದೆ. ಪೊಲೀಸರ ಕಾರ್ಯಾಚರಣೆಯಿಂದ ಸರಗಳ್ಳತನ ತಹಬದಿಗೆ ಬಂದಿತ್ತು. ಆದರೆ ಮತ್ತೆ ಸರಗಳ್ಳರು ತಮ್ಮ ಚಳಕ ಆರಂಭಿಸಿದ್ದು ಪೊಲೀಸರು ಕಳ್ಳರ ಹೆಡೆಮುರಿ ಕಟ್ಟುವ ಅಗತ್ಯವಿದೆ.


Spread the love

Leave a Reply

Please enter your comment!
Please enter your name here