ಮೈಸೂರಿನಲ್ಲಿ ಸಹಾಯಕ್ಕೆಂದು ಬಂದು ಜೀವ ತೆತ್ತರು

Spread the love

ಮೈಸೂರಿನಲ್ಲಿ ಸಹಾಯಕ್ಕೆಂದು ಬಂದು ಜೀವ ತೆತ್ತರು

ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರನ್ನು ಹೊರತರಲು ಯತ್ನಿಸಿದ ಇಬ್ಬರು ಯುವಕರು ವಿದ್ಯುತ್ ಪ್ರವಹಿಸಿ, ದಾರುಣವಾಗಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ನಗರದ ರೈಲ್ವೆ ವರ್ಕ್ ಶಾಪ್ ಬಳಿಯ ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ.

ಅಶೋಕಪುರಂ ನಿವಾಸಿಗಳಾದ ಕಿರಣ್(45) ಹಾಗೂ ರವಿಕುಮಾರ್(33) ಮೃತ ದುರ್ದೈವಿಗಳು. ರವಿ, ಸಂದೇಶ, ಶಿವಕುಮಾರ್ ಹಾಗೂ ಮತ್ತೊಬ್ಬನನ್ನು ವಿದ್ಯುತ್ ಶಾಕ್‌ನಿಂದ ಗಾಯಗೊಂಡು ಕೆ.ಆರ್.ಆಸ್ಪತ್ರೆಯ ಸುಟ್ಟಗಾಯಗಳ ವಾರ್ಡ್‌ಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ರವಿ ಎಂಬುವರು ಗುರುವಾರ ತಡರಾತ್ರಿ ಇನ್ನೋವಾ ಕಾರನ್ನು ಚಾಲನೆ ಮಾಡಿಕೊಂಡು ನಾಚನಹಳ್ಳಿಪಾಳ್ಯದ ಕಡೆಯಿಂದ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮವಾಗಿ ವಿದ್ಯುತ್ ಕಂಬ ಮತ್ತು ಪಕ್ಕದಲ್ಲಿಯೇ ಇದ್ದ ಕಾಂಪೌಂಡ್ ಗೋಡೆಯ ನಡುವೆ ಕಾರು ಸಿಲುಕಿದೆ. ಇನ್ನು ಡಿಕ್ಕಿ ಮಾಡಿದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಕಂಬದ ಕಬ್ಬಿಣದ ಸರಳುಗಳು ಹೊರಗೆ ಬಂದಿವೆ. ಇದಕ್ಕೆ ಕಂಬದ ಹೈವೋಲ್ಟೇಜ್ ತಂತಿಗಳು ಸಂಪರ್ಕ ಪಡೆದಿವೆ. ಘಟನೆ ನಡೆದು 20 ನಿಮಿಷಗಳ ಬಳಿಕ ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಚಾಲಕರಾದ ರವಿಕುಮಾರ್ ಮತ್ತು ಕಿರಣ್ ಕಾರು ಚಾಲಕನ ನೆರವಿಗೆ ಬಂದಿದ್ದು, ವಿದ್ಯುತ್ ಸಂಪರ್ಕ ಪಡೆದಿರುವುದನ್ನು ಗಮನಿಸದೇ, ಸಿಲುಕಿದ್ದ ಕಾರನ್ನು ಹೊರತೆಗೆಯಲು ಮುಂದಾಗಿದ್ದಾರೆ.

ಈ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಸಂದೇಶ್ ಶಿವಕುಮಾರ್ ಹಾಗೂ ಮತ್ತೋರ್ವ ವ್ಯಕ್ತಿ ಕೂಡ ನೆರವಿಗೆ ಬಂದಿದ್ದಾರೆ. ಕಾರನ್ನು ಹೊರ ತೆಗೆಯಲು ಯತ್ನಿಸಿದ ತಕ್ಷಣವೇ ವಿದ್ಯುತ್ ಶಾಕ್‌ನಿಂದ ರವಿಕುಮಾರ್ ಮತ್ತು ಕಿರಣ್ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕಾರು ಚಾಲಕ ರವಿ, ನೆರವಿಗೆ ಬಂದ ದಾರಿಹೋಕರಾದ ಸಂದೇಶ್, ಶಿವಕುಮಾರ್ ಮತ್ತು ಮತೋರ್ವ ವ್ಯಕ್ತಿಗೆ ಸುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿದ ಸಂಚಾರ ಉಪ ವಿಭಾಗದ ಎಸಿಪಿ ಪರುಶುರಾಮಪ್ಪ, ಕೆಆರ್ ಉಪವಿಭಾಗದ ಎಸಿಪಿ ಗಂಗಾಧರಸ್ವಾಮಿ, ಕೆ.ಆರ್.ಸಂಚಾರ ಠಾಣೆಯ ಪ್ರಭಾರ ಪಿಐ ಮುನಿಯಪ್ಪ, ಅಶೋಕಪುರಂ ಠಾಣೆ ಪಿಐ ರಮೇಶ್ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ರವಿಕುಮಾರ್ ಮತ್ತು ಕಿರಣ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದು, ಉಳಿದ ನಾಲ್ವರಿಗೆ ಚಿಕಿತ್ಸೆ ಮುಂದುವರೆದಿದೆ. ಅಪಘಾತ ಸಂಬಂಧ ಕೆ.ಆರ್.ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವವರ ಸಂಬಂಧ ಅಶೋಕ್ ಪುರಂ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Spread the love