ಮೈಸೂರಿನಲ್ಲಿ ಸಾಮೂಹಿಕ ಗಣಪತಿ ಮೂರ್ತಿಗಳ ವಿಸರ್ಜನೆ

Spread the love

ಮೈಸೂರಿನಲ್ಲಿ ಸಾಮೂಹಿಕ ಗಣಪತಿ ಮೂರ್ತಿಗಳ ವಿಸರ್ಜನೆ

ಮೈಸೂರು: ನಗರದಾದ್ಯಂತ ಭಾನುವಾರ ಒಂದೇ ದಿನ ಸುಮಾರು ಎಂಟುನೂರು ಗಣೇಶ ಮೂರ್ತಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು. ಇದೇ ವೇಳೆ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.

ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ವೃತ್ತಗಳಲ್ಲಿ ಭಗದ್ವಜ ಹಾಕಲಾಗಿತ್ತು. ನಗರದ ವಿವಿಧ ಬಡಾವಣೆಗಳಿಂದ 800ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಾಹನಗಳಲ್ಲಿ ಮೆರವಣಿಗೆ ನಡೆಸಿದ ಭಕ್ತರು, ಕೊನೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾವೇಶಗೊಂಡರು. ಸಾವಿರಾರು ಜನರು ಈ ಸಂದರ್ಭ ಜಮಾವಣೆಗೊಂಡ ಹಿನ್ನೆಲೆ ಇಡೀ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತು.

ಮೆರವಣಿಗೆಯಲ್ಲಿ ನೂರಾರು ಗಣೇಶ ಮೂರ್ತಿಗಳೊಂದಿಗೆ ಸಾವಿರಾರು ಯುವಕರು ಭಾಗವಹಿಸಿದ್ದರು. ಕಲಾ ತಂಡಗಳು ಮತ್ತು ಯುವಕರ ನೃತ್ಯ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಬಳಿಕ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಕೊನೆಗೆ ಶ್ರೀರಂಗಪಟ್ಟಣ್ಣದ ಕಾವೇರಿ ನದಿಯಲ್ಲಿ ಎಲ್ಲಾ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಈ ವೇಳೆ. ನಗರದ ರಸ್ತೆಗಳಾದ ಮಹಾತ್ಮ ಗಾಂಧಿ ರಸ್ತೆ, ರಾಮಸ್ವಾಮಿ ವೃತ್ತ, ಸಿದ್ದಪ್ಪ ವೃತ್ತ, ಅಗ್ರಹಾರ ಹಾಗೂ ಕೋಟೆ ಆಂಜನೇಯ ದೇವಸ್ಥಾನ ಆವರಣಗಳು ಕೇಸರಿ ಭಗವಧ್ವಜಗಳೊಂದಿಗೆ ಕಂಗೊಳಿಸುತ್ತಿದ್ದವು. ರಸ್ತೆ ಮೂಲಕ ಆರಂಭಗೊಂಡ ಬೃಹತ್ ಮೆರವಣಿಗೆಯು ರಸ್ತೆ ಉದ್ದಕ್ಕೂ ಗಣಪತಿಯ ಘೋಷಣೆಗಳು ಮೊಳಗಿದವು.

ಗಣೇಶನ ಮೂತಿಯೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಸಾವರ್ಕರ್ ಎಂದರೆ ಶಕ್ತಿ, ಸಾರ್ವಕರ್ ಎಂದರೆ ಸ್ಫೂರ್ತಿ ಸಾವರ್ಕಕರ್ ಎಂದರೆ ಸ್ವಾತಂತ್ರ್ಯ ಎಂಬಿತ್ಯಾದಿ ಭಿತ್ತಿ ಫಲಕಗಳು ಕಂಡುಬಂದವು.

ಗಣೇಶನ ಸಾಮೂಹಿಕ ವಿಸರ್ಜನೆ ಮತ್ತು ಮೆರವಣಿಗೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಅಶೋಕ ರಸ್ತೆ, ಮೈಸೂರು -ಬೆಂಗಳೂರು ರಸ್ತೆಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದರು.


Spread the love