ಮೈಸೂರಿನಲ್ಲಿ ಹತ್ತು ದಿನಗಳ ದಸರಾ ರಂಗೋತ್ಸವ

Spread the love

ಮೈಸೂರಿನಲ್ಲಿ ಹತ್ತು ದಿನಗಳ ದಸರಾ ರಂಗೋತ್ಸವ

ಮೈಸೂರು: ರಂಗಾಯಣ ವತಿಯಿಂದ ರಂಗ ಭೀಷ್ಮ ಬಿ.ವಿ. ಕಾರಂತ ಅವರ ಜನ್ಮ ದಿನದ ಅಂಗವಾಗಿ ಆಚರಿಸಲ್ಪಡುವ ಭಾರತೀಯ ರಂಗಸಂಗೀತ ದಿನದ ಭಾಗವಾಗಿ ಹಾಗೂ ದಸರಾ ಉತ್ಸವ ಹಿನ್ನೆಲೆ ಸೆ.19ರಿಂದ ರಂಗ ಸಂಗೀತೋತ್ಸವ, ದಸರಾ ರಂಗೋತ್ಸವ ಆಯೋಜಿಸಲಾಗಿದೆ.

ಪ್ರತಿ ವರ್ಷ ಸೆ.19ರಂದು ಬಿ.ವಿ.ಕಾರಂತ ಅವರ ಜನ್ಮ ದಿನದಂದು ಭಾರತೀಯ ರಂಗಸಂಗೀತ ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆ ಸೆ.19ರಿಂದ 24ರವರೆಗೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ರಂಗ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮವನ್ನು ಅಂದು ಸಂಜೆ 6ಕ್ಕೆ ಆಯೋಜಿಸಿದ್ದು, ಮುಂಬೈನ ರಂಗ ನಿರ್ದೇಶಕ ಅಮೋದ್ ಭಟ್ ಉದ್ಘಾಟಿಸಲಿದ್ದಾರೆ. ಜತೆಗೆ ಮುಖ್ಯ ಅತಿಥಿಯಾಗಿ ಚಿತ್ರನಟ ಅರುಣ್ ಸಾಗರ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಬಿ.ವಿ.ಕಾರಂತ ಸಾಕ್ಷ್ಯಾಚಿತ್ರ ಬಿಡುಗಡೆ ಮಾಡಲಾಗುತ್ತದೆ.

ನಾಡಹಬ್ಬ ಮೈಸೂರು ದಸರಾ ಅಂಗವಾಗಿ ರಂಗಾಯಣದಿಂದ ಪ್ರತಿವರ್ಷದಂತೆ ದಸರಾ ರಂಗೋತ್ಸವ ಏರ್ಪಡಿಸಿದ್ದು, ಸೆ.25ರಿಂದ ಅ.4ರವರೆಗೆ ಒಟ್ಟು 10 ದಿನಗಳ ಕಾಲ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ನಾಟಕೋತ್ಸವದಲ್ಲಿ ಹೊಸ ರಂಗ ನಿರ್ದೇಶಕರಿಗೆ ಆದ್ಯತೆ ನೀಡಲಾಗಿದ್ದು, ಕೃಷ್ಣೇಗೌಡ ಆನೆ, ಸಮರಕಥಾ, ಪೊಲೀಸರಿದ್ದಾರೆ ಎಚ್ಚರಿಕೆ, ಮಾಧವಿ, ದಟ್ಸ್ ಆಲ್ ಯುವರ್ ಆನರ್, ಈ ಕೆಳಗಿನವರು, ಮಾರೀಚನ ಬಂಧುಗಳು, ಹಲಗಲಿ ಸಮರ, ವಿಶಾಂಕೇ ಹಾಗೂ ಮಮತೆಯ ಸುಳಿ ನಾಟಕಗಳು ಭೂಮಿಗೀತದಲ್ಲಿ ಪ್ರತಿನಿತ್ಯ ತಲಾ ಒಂದೊಂದು ನಾಟಕ ಪ್ರದರ್ಶನ ಕಾಣಲಿವೆ.

ರಂಗಾಯಣದ ಭೂಮಿಗೀತ ವೇದಿಕೆಯಲ್ಲಿ ಸೆ.19ರಿಂದ ಅ.4ರವರೆಗೆ ನಡೆಯುವ ರಂಗ ಸಂಗೀತೋತ್ಸವ, ದಸರಾ ರಂಗೋತ್ಸವಕ್ಕೆ ಉಚಿತ ಪ್ರವೇಶವಿದ್ದು, ಸಂಗೀತ, ರಂಗಾಸಕ್ತರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಸೆ. 23ರಂದು ಮಧ್ಯಾಹ್ನ 3.30ಕ್ಕೆ ಭೂಮಿಗೀತ ವೇದಿಕೆಯಲ್ಲಿ ಕಾರಂತರ ನೆನಪಿನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ರಂಗಚಿಂತಕ ನಾರಾಯಣ ರಾಯಚೂರ್ ರಂಗಭೂಮಿಯ ಆಸ್ತಿ: ಬಿ.ವಿ.ಕಾರಂತ ವಿಷಯ ಕುರಿತು ಮಾತನಾಡಲಿದ್ದಾರೆ. ನಟ ಕಾಸರಗೋಡು ಚಿನ್ನಾ ಗಡಿಯಾಚೆ ಕಾರಂತ: ರಂಗಚಳವಳಿ ಕುರಿತು ಮಾತನಾಡಲಿದ್ದಾರೆ. ಹಿರಿಯ ರಂಗ ನಿರ್ದೇಶಕ ಗುರುರಾಜ ಮಾರ್ಪಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.


Spread the love