
ಮೈಸೂರಿನಲ್ಲಿ ಹ್ಯಾಂಡಿಕ್ರಾಫ್ಟ್ ಉತ್ಸವಕ್ಕೆ ಆರಂಭ
ಮೈಸೂರು: ಜೆಎಸ್‌ಎಸ್ ಮಹಾ ವಿದ್ಯಾಪೀಠದ ಮೈಸೂರು ಅರ್ಬನ್ ಹಾತ್ ಹಾಗೂ ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ ನಗರದಲ್ಲಿ ಆರಂಭಗೊಂಡಿದೆ.
ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ ಉತ್ಸವ ಚಾಲನೆ ನೀಡಿ ಮಾತನಾಡಿ, ಕರಕುಶಲ ಕರ್ಮಿಗಳಿಗೆ ನೆರವು ನೀಡುವ ಸಲುವಾಗಿ 10 ದಿನಗಳ ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ ಆಯೋಜಿಸಲಾಗಿದೆ. ಮೇಳದಲ್ಲಿ ಪ್ರತಿಯೊಂದು ವಸ್ತುಗಳೂ ತುಂಬಾ ಚೆನ್ನಾಗಿವೆ. ಕೈಯಲ್ಲೇ ತಯಾರಿಸುವುದರಿಂದ ನೈಜವಾಗಿವೆ. ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಬಾರಿಯ ಮೇಳದಲ್ಲಿ ಗುಜರಾತ್ ರಾಜ್ಯದ ಪ್ರಸಿದ್ಧ 60ಕ್ಕೂ ಹೆಚ್ಚು ಕುಶಲ ಕರ್ಮಿಗಳು ಪಾಲ್ಗೊಂಡಿದ್ದಾರೆ. ಪಟೋಲಾ ಸೀರೆ, ಬಾಂದಿನಿ ಸೀರೆ, ಕಸೂತಿ ಮಾಡಿದ ಬೆಡ್‌ಶೀಟ್, ಟವಲ್, ಕುಶನ್ ಸೀರೆಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್, ಮಣ್ಣಿನಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟವಿದೆ. ತಯಾರಕರಿಂದಲೇ ನೇರವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಪ್ರಯತ್ನವನ್ನು ಗುಜರಾತ್ ಸರ್ಕಾರ ಮಾಡುತ್ತಿದೆ. ಈ ಕಾರಣದಿಂದಾಗಿ ಮೈಸೂರು ಹಾಗು ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕೃತಿಯ ಉಡುಗೆ-ತೊಡುಗೆ, ಅಲಂಕಾರಿಕ ವಸ್ತುಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತಿವೆ. ಈ ಉತ್ಸವ ಮಾ.5ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ತೆರೆದಿರಲಿದೆ.
ಕಾರ್ಯಕ್ರಮದಲ್ಲಿ ಎಸ್ಪಿ ಸೀಮಾ ಲಾಟ್ಕರ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜೆ.ಬೆಟಸೂರ ಮಠ, ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ, ಹಣಕಾಸು ವಿಭಾಗದ ನಿರ್ದೇಶಕ ಎಸ್.ಪುಟ್ಟಸುಬ್ಬಪ್ಪ, ಸಾಮಾನ್ಯ ಅಭಿವೃದ್ಧಿ ವಿಭಾಗದ ಪ್ರಭಾರ ನಿರ್ದೇಶಕ ಕೆ.ಎಲ್.ರೇವಣ್ಣಸ್ವಾಮಿ, ಸಂಯೋಜಕ ಶಿವನಂಜಸ್ವಾಮಿ, ಸುಂದರಪ್ಪ ಸೇರಿದಂತೆ ಹಲವರು ಹಾಜರಿದ್ದರು.