ಮೈಸೂರಿನಲ್ಲಿ 18 ಕೋಟಿ ಮೌಲ್ಯದ ಅಂಬರ್‌ಗ್ರೀಸ್ ವಶ

Spread the love

ಮೈಸೂರಿನಲ್ಲಿ 18 ಕೋಟಿ ಮೌಲ್ಯದ ಅಂಬರ್‌ಗ್ರೀಸ್ ವಶ

ಮೈಸೂರು: ಅಕ್ರಮವಾಗಿ ಮಾರಾಟ ಮಾಡಲು ಕೇರಳದಿಂದ ತಂದಿದ್ದ ಸುಮಾರು ೧೮ ಕೋಟಿ ಮೌಲ್ಯದ 9 ಕೆಜಿ 821 ಗ್ರಾಂ ಅಂಬರ್‌ಗ್ರೀಸ್ (ತಿಮಿಂಗಿಲ ವಾಂತಿ) ವಶಪಡಿಸಿಕೊಂಡಿರುವ ಪೊಲೀಸರು ಕೇರಳದ ಮೂವರನ್ನು ಬಂಧಿಸಿದ್ದಾರೆ.

ಅಂಬರ್‌ಗ್ರೀಸನ್ನು ಸುಗಂಧ ದ್ರವ್ಯ ಹಾಗೂ ಔಷಧ ತಯಾರಿಕೆಯಲ್ಲಿ ಬಳಕೆ ಮಾಡಲಿದ್ದು, ಕೋಟ್ಯಂತರ ರೂ ಬೆಲೆ ಬಾಳುತ್ತದೆ. ವಿದೇಶಗಳಲ್ಲಿ ಇದಕ್ಕೆ ಭಾರಿ ಬೇಡಿಕೆ ಇದೆ. ಆರೋಪಿಗಳು ಅಂಬರ್‌ ಗ್ರೀಸನ್ನು ಕೇರಳದಿಂದ ತಂದು ಹೆಚ್.ಡಿ.ಕೋಟೆಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಹ್ಯಾಂಡ್‌ಪೋಸ್ಟ್ ಬಳಿ ದಾಳಿ ನಡೆಸಿದ ಹೆಚ್.ಡಿ.ಕೋಟೆ ಹಾಗೂ ಸೆನ್ ಪೊಲೀಸರು ಅಂಬರ್‌ಗ್ರೀಸ್ ಹಾಗೂ ಕಾರಿನ ಸಮೇತ ಕೇರಳದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು ಅಂಬರ್‌ಗ್ರೀಸನ್ನು ಬೇರೊಬ್ಬರಿಂದ ಪಡೆದುಕೊಂಡು ಮತ್ತೊಬ್ಬರಿಗೆ ಮಾರಾಟ ಮಾಡಲು ಮುಂದಾಗಿದ್ದರು. ಇದರಲ್ಲಿ ಅಂತಾರಾಷ್ಟ್ರೀಯ ಮಾರಾಟ ಜಾಲ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಹೆಚ್.ಡಿ.ಕೋಟೆ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಸೀಮಾ ಲಾಟ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇನ್ನೊಂದು ಪ್ರಕರಣದಲ್ಲಿ ಬಾಡಿಗೆಗೆ ಆಟೋದಲ್ಲಿ ತೆರಳಿ ಚಾಲಕನಿಗೆ ಚಾಕು ತೋರಿಸಿ 2 ಸಾವಿರ ನಗದು, ಒಂದು ಮೊಬೈಲ್ ಹಾಗೂ ಆಟೋದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ವರುಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೇ 19ರಂದು ರವಿ ಎಂಬುವವರ ಆಟೋದಲ್ಲಿ ಇಬ್ಬರು ವ್ಯಕ್ತಿಗಳು ಕಡಕೊಳಕ್ಕೆ ತೆರಳಿದ್ದರು. ಈ ವೇಳೆ ಸ್ನೇಹಿತನನ್ನು ನೋಡಬೇಕೆಂದು ದೇವಲಾಪುರದ ಕಡೆಗೆ ಹೋಗುವಂತೆ ಹೇಳಿ ಮಾರ್ಗ ಮಧ್ಯೆ ಪೂರ್ಣಿಮ ಫಾರಂ ಹೌಸ್ ಬಳಿ ಸ್ನೇಹಿತ ಬರುತ್ತಾನೆಂದು ಆಟೋ ನಿಲ್ಲಿಸಿದ್ದಾರೆ. ಈ ವೇಳೆ ಮೂತ್ರ ವಿಜರ್ಸನೆಗೆಂದು ತೆರಳಿದ ಚಾಲಕ ರವಿಗೆ ಚಾಕು ತೋರಿಸಿ ಆತನ ಬಳಿಯಿದ್ದ 2ಸಾವಿರ ನಗದು, ಒಂದು ಮೊಬೈಲ್ ಫೋನ್ ಕಿತ್ತುಕೊಂಡು, ಆತನನ್ನು ಹಳ್ಳಕ್ಕೆ ತಳ್ಳಿ ಆಟೋದೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ಚಾಲಕ ರವಿ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೇ 21ರಂದು ಆರೋಪಿಯನ್ನು ಬಂಧಿಸಿ ಆಟೋ, ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈತ ತನ್ನ ಸ್ನೇಹಿತನೊಂದಿಗೆ ಇಲವಾಲ, ಬಿಳಿಗೆರೆ, ಮೈಸೂರು ದಕ್ಷಿಣ ಠಾಣೆಗಳ ವ್ಯಾಪ್ತಿಯಲ್ಲಿ ೬ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.

ಸಾರ್ವಜನಿಕರು ಕಳೆದುಕೊಂಡಿದ್ದ, ಕಳುವಾಗಿದ್ದ ಸುಮಾರು 50 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಕಳ್ಳತನವಾಗಿರುವ, ಕಳೆದುಹೋಗಿದ್ದ ಮೊಬೈಲ್‌ಗಳ ಪತ್ತೆಗೆ ಎಸ್‌ಪಿ ಸೀಮಾ ಲಾಟ್ಕರ್ ವಿಶೇಷ ತಂಡ ರಚಿಸಿದ್ದರು. ಅಲ್ಲದೆ ಸಾರ್ವಜನಿಕರಿಗೆ ಮೊಬೈಲ್ ಪತ್ತೆಗೆಂದೇ ಆರಂಭಿಸಿರುವ ಸಿಐಆರ್ ಪೋರ್ಟಲ್‌ನಲ್ಲಿ ಕಳೆದುಹೋಗಿರುವ ಮಾಹಿತಿ ನೋಂದಾಯಿಸುವಂತೆ ತಿಳಿಸಿದ್ದರು. ಈ ಮಾಹಿತಿ ಆಧರಿಸಿ ಕಳೆದ ಎರಡು ತಿಂಗಳಲ್ಲಿ ಕಳೆದುಹೋಗಿದ್ದ 9 ಲಕ್ಷ ಮೌಲ್ಯದ ವಿವಿಧ ಕಂಪನಿಯ 50 ಮೊಬೈಲ್‌ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇಲ್ಲಿಯವರೆಗೆ ಸುಮಾರು 130ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಎಸ್‌ಪಿ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಎಎಸ್ಪಿ ಡಾ.ನಂದಿನಿ.ಬಿ.ಎನ್, ಮೈಸೂರು ಗ್ರಾಮಾಂತರ ಉಪವಿಭಾಗದ ಡಿಎಸ್‌ಪಿ ಶಿವಕುಮಾರ್, ಸಿಪಿಐ ಸ್ವರ್ಣ.ಜಿ.ಎಸ್, ಹೆಚ್.ಡಿ.ಕೋಟೆ ಠಾಣೆ ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್, ಸೆನ್ ಪೊಲೀಸ್ ಠಾಣೆಯ ಪುರುಷೋತ್ತಮ್ ಸೇರಿದಂತೆ ಹಲವರು ಇದ್ದರು.


Spread the love

Leave a Reply

Please enter your comment!
Please enter your name here