ಮೈಸೂರಿನ ಅರಮನೆಯ ಐತಿಹಾಸಿಕ ಕೋಟೆ ಕುಸಿತ

Spread the love

ಮೈಸೂರಿನ ಅರಮನೆಯ ಐತಿಹಾಸಿಕ ಕೋಟೆ ಕುಸಿತ

ಮೈಸೂರು: ಮೈಸೂರಿನ ಐತಿಹಾಸಿಕ ಅರಮನೆಯ ಕೋಟೆ ಮಳೆಯ ಕಾರಣದಿಂದ ಸುಮಾರು 30 ಅಡಿ ಎತ್ತರದ 20 ಅಡಿ ಅಗಲ ವಿಸ್ತೀರ್ಣದಲ್ಲಿ ಕುಸಿದು ಬಿದ್ದಿದೆ.

ಈ ಹಿಂದೆಯೇ ದಸರಾ ಫಿರಂಗಿ ತಾಲೀಮಿನ ವೇಳೆ ಉಂಟಾಗುವ ಭಾರೀ ಸದ್ದಿನಿಂದ ಕೋಟೆ ಬಿರುಕು ಬಿಟ್ಟು ಶಿಥಿಲಗೊಂಡಿತ್ತು. ಜತೆಗೆ ಇತ್ತೀಚೆಗೆ ಸುರಿದ ಭಾರಿ ಮಳೆಯೂ ಪರಿಣಾಮ ಬೀರಿತ್ತು. ಹೀಗಾಗಿ ಕೋಟೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಪ್ರತಿ ದಸರಾ ಉತ್ಸವದ ವೇಳೆ ಮೂರು ಹಂತದಲ್ಲಿ ಆನೆ ಮತ್ತು ಅಶ್ವಗಳಿಗೆ 21 ಸುತ್ತು ಫಿರಂಗಿ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ. ಈ ವೇಳೆ ಹೊರಡುವ ಭಾರೀ ಪ್ರಮಾಣದ ಸದ್ದಿನಿಂದ (105.3 ಡೆಸಿಬಲ್) ಹಳೆಯದಾದ ಕೋಟೆ ಬಿರುಕು ಬಿಟ್ಟಿತ್ತು. ಇದನ್ನು ಗಮನಿಸಿದ ಅರಮನೆ ಮಂಡಳಿ 2022ರ ದಸರಾ ಉತ್ಸವದ ಎರಡು ಮತ್ತು ಮೂರನೇ ಹಂತದ ಫಿರಂಗಿ ತಾಲೀಮನ್ನು ಬೇರೆಡೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿತ್ತು. ಬಳಿಕ ನಗರದ ವಸ್ತುಪ್ರದರ್ಶನ ಆವರಣದಲ್ಲಿ ತಾಲೀಮು ನಡೆಸಿದ್ದನ್ನು ಸ್ಮರಿಸಬಹುದು.

ಕಟ್ಟಡ ಕುಸಿತಕ್ಕೆ ಇದಿಷ್ಟೇ ಅಲ್ಲದೇ ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ನಿರ್ವಹಣೆಯ ಕೊರತೆಯೂ ಎದ್ದು ಕಾಣುತ್ತಿದೆ. ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಅದನ್ನು ಸುರುಕಿ ಗಾರೆ ಹಾಕಿ ಮುಚ್ಚದೆ ಅಥವಾ ಪ್ಲಾಸ್ಟಿಕ್ ಹೊದಿಕೆ ಹಾಕದೇ ನಿರ್ಲಕ್ಷ್ಯವಹಿಸಿದ ಹಿನ್ನೆಲೆ ಕಳೆದೊಂದು ವಾರದಿಂದ ಸುರಿದ ಭಾರಿ ಮಳೆಯಿಂದ ನೀರು ಬಿರುಕಿನಲ್ಲಿ ಸೇರಿ, ಕಟ್ಟಡ ಮತ್ತಷ್ಟು ಶಿಥಿಲಗೊಂಡು ಕುಸಿದಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದೀಗ ಅರಮನೆ ಮಂಡಳಿ ಕೋಟೆ ಭಾಗಕ್ಕೆ ಟಾರ್ಪಲ್ ಹೊದಿಸಿ ಮತ್ತೆ ಕುಸಿಯದಂತೆ ಕ್ರಮ ಕೈಕೊಂಡಿದೆ

ಇತಿಹಾಸ ತಜ್ಞರ ಪ್ರಕಾರ ಕಲ್ಲು, ಮಣ್ಣು ಮತ್ತು ಸುರ್ಕಿ ಗಾರೆಯಿಂದ ನಿರ್ಮಾಣ ಮಾಡಿರುವ ಅರಮನೆಯ ಕೋಟೆಗೆ ಬರೋಬ್ಬರಿ 220 ವರ್ಷಗಳಾಗಿದ್ದು, ಇಂದಿಗೂ ಗಟ್ಟಿಮುಟ್ಟಾಗಿ ನಿಂತಿದೆ. ಆದರೆ ಇತ್ತೀಚೆಗೆ ಕೋಟೆಯ ಮೇಲೆ ಮತ್ತು ಕೋಟೆಯ ಸುತ್ತಲೂ ಇರುವ ಗಿಡಗಂಟಿ ತೆರವು ಹಾಗೂ ಕೋಟೆಯ ವಾಕಿಂಗ್ ಪಾತ್‌ನಲ್ಲಿ ನೀರು ನಿಲ್ಲದಂತೆ ನಿರ್ವಹಣೆ ಮಾಡದ ಹಿನ್ನೆಲೆ ಕೋಟೆ ಶಿಥಿಲಗೊಂಡು ಕುಸಿದಿದೆ. ಅರಮನೆ ಮಂಡಳಿ ಕಾಲ ಕಾಲಕ್ಕೆ ಸಮರ್ಪಕ ನಿರ್ವಹಣೆ ಮಾಡಿಕೊಂಡು ಬಂದರೆ ಇನ್ನೂ ನೂರು ವರ್ಷ ಗಟ್ಟಿಮುಟ್ಟಾಗಿ ಇರಲಿದೆ.

ಈಗಿರುವ ಅಂಬಾವಿಲಾಸ ಅರಮನೆಯ ಜಾಗದಲ್ಲಿ ಇದ್ದ ಸೌಂದರ್ಯ ವಿಲಾಸ ಅರಮನೆ 1790ಕ್ಕೂ ಮುನ್ನಾ ಸಿಡಿಲು ಬಡಿದು ಸಂಪೂರ್ಣ ನಾಶವಾಗಿತ್ತು. ಬಳಿಕ ಟಿಪ್ಪುನ ಆಳ್ವಿಕೆ ಕೊನೆಗೊಂಡು ಮುಮ್ಮಡಿ ಕೃಷ್ಣರಾಜ ಒಡೆಯರ್ ರಾಜ್ಯಭಾರ ನಡೆಸುವಾಗ ಸೌಂದರ್ಯ ವಿಲಾಸ ಅರಮನೆ ಇದ್ದ ಜಾಗದಲ್ಲಿ 1801ರಲ್ಲಿ ಮರದ ಅರಮನೆ ಕಟ್ಟಿಸಿದರು. ನಂತರ ಅರಮನೆಯ ಸುತ್ತ 1802ರಲ್ಲಿ ಕಲ್ಲು, ಮಣ್ಣು ಮತ್ತು ಸುರ್ಕಿ ಗಾರೆ ಬಳಿಸಿ ಬಲಿಷ್ಟವಾದ ಕೋಟೆ ನಿರ್ಮಿಸಿದ್ದರು ಎಂದು ಹೇಳಿದ್ದಾರೆ.


Spread the love