ಮೈಸೂರಿನ ಐದು ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್

Spread the love

ಮೈಸೂರಿನ ಐದು ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್

ಮೈಸೂರು: ನಗರದ ಜನನಿಬಿಡ ಪ್ರದೇಶದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಪ್ರಮುಖ ಐದು ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ಪದ್ದತಿ ಜಾರಿಗೆ ತರಲು ಮೈಸೂರು ನಗರಪಾಲಿಕೆ ಮುಂದಾಗಿರುವುದಾಗಿ ಮೇಯರ್ ಶಿವಕುಮಾರ್ ಹೇಳಿದರು.

ನಗರದ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪದಾಧಿಕಾರಿಗಳ ಜತೆಗೆ ಏರ್ಪಡಿಸಿದ್ದ ಸಂವಾದದಲ್ಲಿ ಸಂಘದ ಬೇಡಿಕೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ನಗರದಲ್ಲಿ ವಾಹನಗಳ ನಿಲುಗಡೆಗೆ ತುಂಬಾ ತೊಂದರೆಯಾಗಿರುವುದರಿಂದ ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆ ತಂದರೆ ಅನುಕೂಲವಾಗಲಿದೆ. ಹಾಗಾಗಿ, ಶೀಘ್ರದಲ್ಲೇ ಕೌನ್ಸಿಲ್ ಸಭೆಯಲ್ಲಿ ಸಾಧಕಭಾದಕಗಳ ಕುರಿತು ಚರ್ಚಿಸಿದ ಬಳಿಕ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ನಗರದ ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಧನ್ವಂತ್ರಿ ರಸ್ತೆ, ಅಶೋಕಪುರಂ ರಸ್ತೆ, ಶಿವರಾಂಪೇಟೆ ರಸ್ತೆಯಲ್ಲಿ ಪೇ ಅಂಡ್ ಪಾರ್ಕಿಂಗ್ ತರಲು ಬೇಕಾದ ಕ್ರಮಕೈಗೊಳ್ಳಲಾಗುವುದು. ಮುಂದೆ ಈ ರಸ್ತೆಯಲ್ಲಿ ಯಾವ ರೀತಿಯಲ್ಲಿ ವಾಹನಗಳ ನಿಲುಗಡೆಗೆ ಅನುಸರಿಸಬೇಕಾದ ಕ್ರಮ, ಶುಲ್ಕ ನಿಗದಿ ಸೇರಿದಂತೆ ಇನ್ನಿತರ ನಿರ್ಧಾರ ಕೈಗೊಳ್ಳುವ ಜತೆಗೆ ಪೊಲೀಸ್ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ವಿವರಿಸಿದರು.

ಇದಕ್ಕೂ ಮೊದಲು ನಡೆದ ಸಂವಾದದಲ್ಲಿ ನಾಲ್ಕು ಪುಟಗಳ ಮನವಿ ಪತ್ರ ಸಲ್ಲಿಸಿದ ಪದಾಧಿಕಾರಿಗಳು ಹಲವಾರು ಬೇಡಿಕೆಗಳನ್ನು ಮುಂದಿಟ್ಟರು. ನಗರದಲ್ಲಿ ದಿನದಿಂದ ದಿನಕ್ಕೆ ವಹಿವಾಟು ಹೆಚ್ಚಾಗಿ ಮಳಿಗೆಗಳ ಕೊರತೆ ಇರುವ ಕಾರಣ ಸಬ್ ಅರ್ಬನ್ ಬಸ್ ನಿಲ್ದಾಣ ಎದುರು, ಮೃಗಾಲಯದ ಎದುರು, ಬಲ್ಲಾಳ್ ಸಮೀಪವಿರುವ ಮಯೂರ ಕಾಂಪ್ಲೆಕ್ಸ್, ನಂಜರಾಜ ಬಹದ್ದೂರ್ ಛತ್ರದ ಖಾಲಿ ಜಾಗದಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು. ಉದ್ಯಮದಾರರಿಗೆ ಟ್ರೇಡ್ ಲೈಸನ್ಸ್ ಕೊಡುವ ವ್ಯವಸ್ಥೆಯನ್ನು ಒಂದು ವರ್ಷದಿಂದ ಮೂರು ವರ್ಷಕ್ಕೆ ಹೆಚ್ಚಿಸಿರುವುದು ಸ್ವಾಗತಾರ್ಹವಾದರೂ ಅದನ್ನು ಐದು ವರ್ಷಕ್ಕೆ ಹೆಚ್ಚಿಸಿ, ನಾಲ್ಕು ವರ್ಷದ ಶುಲ್ಕವನ್ನು ಕಟ್ಟಿದವರಿಗೆ ಒಂದು ವರ್ಷದ ರಿಯಾಯಿತಿ ಕೊಟ್ಟು ಉದ್ಯಮ ನಡೆಸುವವರಿಗೆ ಕೊಡುಗೆ ನೀಡುವಂತೆ ಮನವಿ ಮಾಡಿದರು.


Spread the love

Leave a Reply

Please enter your comment!
Please enter your name here