
ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳಿಗೆ ಚಾಲನೆ
ಮೈಸೂರು: ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕರಾದ ಎಸ್.ಎ. ರಾಮದಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ 7 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ವಿದ್ಯಾರಣ್ಯಪುರಂ ನ ಬಿಜೆಪಿ ಕಚೇರಿಯ ಎದುರು ಹಲವು ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ.
ಕೋವೀಡ್ ನ ಸೊಂಕಿತರ ಆರೋಗ್ಯದ ಹಿತದೃಷ್ಟಿಯಿಂದ ಆಕ್ಸಿಜನ್ ಸೌಲಭ್ಯ ಹೊಂದಿರುವ 2 ಆಂಬ್ಯುಲೆನ್ಸ್ ಸೇವೆಯನ್ನು ಉಚಿತವಾಗಿ ನೀಡಿದ್ದಾರೆ. ಇದರ ಜತೆಗೆ ಕಾರ್ಮಿಕ ಇಲಾಖೆಯ ವತಿಯಿಂದ ಹಲವು ಫಲಾನುಭವಿ ಗಳಿಗೆ ವಿವಿಧ ಯೋಜನೆಗಳಾದ ಸಾಮಾಜಿಕ ಭದ್ರತೆ, ಲೇಬರ್ ಕಾರ್ಡ್, ಮನಸ್ವಿನಿ ಯೋಜನೆ,ಹಿರಿಯ ನಾಗರಿಕ ಪಿಂಚಣಿ , ಸಂಧ್ಯಾ ಸುರಕ್ಷಾ ಯೋಜನೆಯ ಆದೇಶದ ಪತ್ರವನ್ನು ಸಾಂಕೇತಿಕವಾಗಿ 5 ಜನರಿಗೆ ನೀಡಲಾಯಿತು.
234 ಜನರಿಗೆ ಕನ್ನಡಕ ಮತ್ತು 37 ಜನರಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಬಗ್ಗೆ ವೈದರು ಸೂಚಿಸಿದ ಹಿನ್ನಲೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆಗಾಗಿ ಮಹಾವೀರ ಆಸ್ಪತ್ರೆಗೆ ಅನುಮತಿ ಪತ್ರವನ್ನು ಸಾಂಕೇತಿಕವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಮದಾಸ್ ಅವರು, ನರೇಂದ್ರಮೋದಿ ನೇತೃತ್ವದ ಎನ್ ಡಿ ಎ ಸರ್ಕಾರವು 2 ನೇ ಆವೃತ್ತಿಯ 2 ನೇ ವರ್ಷವನ್ನು ಪೂರೈಸಿದೆ. ಕೋವಿಡ್ ಸಂದರ್ಭದಿಂದಾಗಿ ನಾವು ಮನೆ ಬಾಗಿಲಿಗೆ ಸೇವೆ ಎನ್ನುವ ವಿಷಯವನ್ನು ತೆಗೆದುಕೊಂಡು ನಮ್ಮ ಕ್ಷೇತ್ರದಲ್ಲಿರುವ ಎಲ್ಲ ಮನೆಗೂ ಭೇಟಿ ನೀಡುವ ಕೆಲಸ ಪ್ರಾರಂಭವಾಗಿದೆ ಮತ್ತು ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಯೋಜನೆಗಳನ್ನು ತಲುಪಿಸುವ ಸೇವಾ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ವಿಶೇಷವಾಗಿ ಮೈಸೂರಿನಲ್ಲಿ ಅಧಿಕಾರಿಗಳು ಕಚೇರಿ ಮುಚ್ಚಿದ್ದರೂ ಸಹ ತಮ್ಮ ಮನೆಯಲ್ಲೇ ಈ ಕಾರ್ಯಗಳನ್ನು ಮಾಡಿ ಫಲಾನುಭವಿಗಳ ಮನೆಗೆ ಯೋಜನೆಗಳನ್ನು ಕೊಂಡೊಯ್ಯುವ ಅವರ ಕಾರ್ಯ ಶ್ಲಾಘನೀಯ ಎಂದರು.