
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿಪ್ರದರ್ಶನ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಿರುವ ಶಾಸಕ ಜಿ.ಟಿ.ದೇವೇಗೌಡ ಅವರು ನಾನು ಒಬ್ಬಂಟಿಯಲ್ಲ. ನನಗೆ ಯಾರೂ ಇಲ್ಲ ಎಂದು ಭಾವಿಸಬೇಡಿ ಎಂದು ವಿರೋಧಿಗಳು ಸವಾಲು ಹಾಕಿದ್ದಾರೆ ಅಲ್ಲದೆ, ಮೂರನೇ ಬಾರಿಗೆ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಸಂಕಲ್ಪ ಮಾಡಿದ್ದಾರೆ.
ಮೈಸೂರು ತಾಲೂಕಿನ ದಾರಿಪುರ ಗ್ರಾಮದಲ್ಲಿ ಆಯೋಜಿಸಿದ್ದ ಯುವ ನಾಯಕರ ಜನ್ಮ ದಿನೋತ್ಸವ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿ.ಟಿ.ದೇವೇಗೌಡನಿಗೆ ಜಿಟಿಡಿಯೇ ಸರಿಸಾಟಿಯೆಂದು ಕ್ಷೇತ್ರದ ಜನರು ಅರಿತಿರುವುದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಜಯಪುರ ಹೋಬಳಿಯ ನಾಯಕರೊಬ್ಬರು ಐದು ಸಾವಿರ ಜನರನ್ನು ಸೇರಿಸಲು ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳಿದ್ದರು. ಈ ಮಾತಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದೆ. ಆದರೆ, ಜಿ.ಟಿ.ದೇವೇಗೌಡ ಒಬ್ಬಂಟಿಯಲ್ಲ ಎನ್ನುವುದನ್ನು ಕ್ಷೇತ್ರದ ಜನರು ಸಮಾವೇಶದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.
ಈ ಜಿ.ಟಿ.ದೇವೇಗೌಡ ಮಾತನಾಡಲ್ಲ. ಆದರೆ, ಎಲ್ಲರನ್ನೂ ಪ್ರೀತಿಸುವುದೇ ತಪ್ಪಾ, ನಂಬೋದು ತಪ್ಪಾ? ಈ ಹೋಬಳಿಯ ಮುಖಂಡರೊಬ್ಬರು ನನ್ನ ಮತ್ತು ಮಗನ ಬಗ್ಗೆ ಮಾತನಾಡಿ ಹೇಳಿದ ಮಾತಿಗೆ ಸವಾಲಾಗಿ ಸ್ವೀಕರಿಸಿ ಸಮಾವೇಶ ಮಾಡಿದ್ದಕ್ಕೆ ತುಂಬು ಹೃದಯದ ನಮಸ್ಕಾರ ಹೇಳುತ್ತೇನೆಂದು ಎರಡು ಕೈ ಮುಗಿದು ನಮಸ್ಕರಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಐವತ್ತು ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದ ಜನರು ಎರಡು ಬಾರಿಯಿಂದ ನನ್ನನ್ನು ಗೆಲ್ಲಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನರ ಋಣವನ್ನು ನಾನು ತೀರಿಸಲಾಗದು ಎಂದರು.
ಕಲಾಮಂದಿರದಲ್ಲಿ ಕಾರ್ಯಕ್ರಮ ನಡೆದಾಗ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂದಿದ್ದು ನಿಜವಾಯಿತು. ಕುಮಾರ ಪರ್ವ ಮಾಡಿದ ಮೇಲೆ ಎರಡನೇ ಬಾರಿ ಸಿಎಂ ಆಗಿದ್ದರು. ಈಗ ಚಾಮುಂಡೇಶ್ವರಿಯ ನೆಲದಲ್ಲೇ ಪಂಚರತ್ನ ಯಾತ್ರೆ ಕಾರ್ಯಕ್ರಮ ಮಾಡುವ ಮೂಲಕ ಮೂರನೇ ಬಾರಿಗೆ ಸಿಎಂ ಮಾಡುವ ಗುರಿ ಹೊಂದಲಾಗಿದೆ. ಎಚ್.ಡಿ.ದೇವೇಗೌಡರು ಇಳಿ ವಯಸ್ಸಿನಲ್ಲೂ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರು ಜೀವಂತವಾಗಿ ಇರುವಾಗಲೇ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿ ಕನಸು ನನಸು ಮಾಡಬೇಕು. ನನ್ನನ್ನು ಗೆಲ್ಲಿಸಿದರೆ ಕುಮಾರಸ್ವಾಮಿ ಸಿಎಂ ಮಾಡಿದಂತೆ ಎಂದು ಭಾವನಾತ್ಮಕವಾಗಿ ಕಾರ್ಯಕರ್ತರ ಮನ ಮುಟ್ಟುವಂತೆ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನನ್ನು ಮಗನಂತೆ ಕಂಡು ಹಾರೈಸಿದ್ದಾರೆ. 2018ರ ಚುನಾವಣೆಯಲ್ಲೂ ಕೈ ಬಿಡದೆ ಆಯ್ಕೆ ಮಾಡಿದ್ದೀರಾ? ಮುಂದೆಯೂ ನಮ್ಮೊಂದಿಗೆ ಇದ್ದು ಗೆಲುವಿಗೆ ಕೆಲಸ ಮಾಡಬೇಕು. ಎಚ್.ಡಿ.ದೇವೇಗೌಡರು ಕಟ್ಟಿದ ಪಕ್ಷವನ್ನು ಉಳಿಸಬೇಕಾದರೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ವಿಜಯದ ಪತಾಕೆ ಹಾರಿಸಬೇಕು ಎಂದು ಕರೆ ನೀಡಿದರು.