ಮೈಸೂರಿನ ಚುಂಚನಕಟ್ಟೆಯಲ್ಲಿ ಕಾವೇರಿ ಜಲನರ್ತನ!

Spread the love

ಮೈಸೂರಿನ ಚುಂಚನಕಟ್ಟೆಯಲ್ಲಿ ಕಾವೇರಿ ಜಲನರ್ತನ!

ಮೈಸೂರು: ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ತಾನು ಹರಿದಲ್ಲೆಲ್ಲ ಜಲಧಾರೆಗಳನ್ನು ಸೃಷ್ಠಿಸಿ ಪ್ರವಾಸಿಗರ ಮೈಮನ ತಣಿಸಿದ್ದು ಅದರಂತೆ ಮೈಸೂರಿನ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಧನುಷ್ಕೋಟಿಯಲ್ಲಿ ಸೃಷ್ಠಿಯಾಗಿರುವ ಜಲಧಾರೆ ಪ್ರವಾಸಿಗರ ಪ್ರಮುಖ ಆಕರ್ಷಣೀಯ ತಾಣವಾಗಿದೆ.

ಕೊಡಗಿನಲ್ಲಿ ವರುಣ ಅಬ್ಬರಿಸಿದಾಗ ಕಾವೇರಿ ರೌದ್ರಾವತಾರ ತಾಳಿ ಹರಿಯುತ್ತಾಳೆ ಹೀಗೆ ವಿಶಾಲವಾಗಿ ಹರಿಯುತ್ತಾ ಬರುವ ಆಕೆ ಕೆ.ಆರ್.ನಗರದ ಚುಂಚನಕಟ್ಟೆ ಬಳಿ ಹೆಬ್ಬಂಡೆ ಮೇಲಿಂದ ತಳಕ್ಕೆ ಭೋರ್ಗರೆದು ಚಿಮ್ಮುವಾಗ ಸೃಷ್ಠಿಯಾಗುವ ರೌದ್ರತೆ ಮತ್ತು ಜಲನರ್ತನ ನೋಡುಗರನ್ನೊಮ್ಮೆ ಹುಬ್ಬೇರಿಸುವಂತೆ ಮಾಡುತ್ತದೆ. ಈ ದೃಶ‍್ಯವನ್ನು ವರ್ಣಿಸುತ್ತಾ ಹೋದಂತೆ ಪದಗಳೇ ಸಾಲದಾಗಿ ಬಿಡುತ್ತದೆ.

ಇನ್ನು ನಾವು ಕಾವೇರಿ ನದಿಯಿಂದ ಸೃಷ್ಠಿಯಾಗಿರುವ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತದ ಬಗ್ಗೆ ಹೇಳುವುದಾದರೆ ಈ ಜಲಧಾರೆ ಈ ಭಾಗದ ಜನರಿಗೆ ಅಚ್ಚುಮೆಚ್ಚಾಗಿದ್ದು, ಇದರ ಸೌಂದರ್ಯ ಆಸ್ವಾದಿಸಲೆಂದೇ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ.

ಈ ಬಾರಿ ಕೊಡಗಿನಲ್ಲಿ ಉತ್ತಮವಾಗಿ ಮಳೆ ಯಾಗುತ್ತಿರುವುದರಿಂದ ಮತ್ತು ಕಾವೇರಿ ನದಿಯಲ್ಲಿ ನೀರಿನ ಹರಿವು ಕೂಡ ಉತ್ತಮವಾಗಿರುವುದರಿಂದ ಕಾವೇರಿಯ ನರ್ತನವಂತು ತುಸು ಹೆಚ್ಚಾಗಿಯೇ ಇದೆ.

ಹೆಬ್ಬಂಡೆಗಳ ಮೇಲೆ ಅಗಲವಾಗಿ ಕೆಂಬಣ್ಣದಿಂದ ಕೂಡಿ ಧುಮ್ಮಿಕ್ಕುವ ಜಲಪಾತವು ಸುಮಾರು 40ಕ್ಕೂ ಹೆಚ್ಚು ಅಡಿ ಎತ್ತರದಿಂದ ವಿಶಾಲವಾಗಿ ಜಿಗಿದು ಸುಂದರ ದೃಶ್ಯಗಳನ್ನು ನೋಡುಗರಿಗೆ ತೆರೆದಿಡುತ್ತದೆ. ಇದನ್ನು ನೋಡಲೆಂದೇ ಪ್ರವಾಸಿಗರ ದಂಡು ಇತ್ತ ಸುಳಿಯುತ್ತದೆ.

ಧನುಷ್ಕೋಟಿಯ ಚೆಲುವು ಪ್ರವಾಸಿಗರನ್ನು ಹುಚ್ಚೆಬ್ಬಿಸುವುದು ಸಹಜ ಹೀಗಾಗಿಯೇ ಕೆಲವರು ನೀರಿಗಿಳಿದು ಈಜುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಈಜುವುದು ಅಪಾಯಕಾರಿ ಎಂಬ ಫಲಕವಿದ್ದರೂ ಅದನ್ನು ನಿರ್ಲಕ್ಷಿಸಿ ಕಣ್ತಪ್ಪಿಸಿ ನೀರಿಗಿಳಿದು ಹಲವರು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಹೀಗಾಗಿ ಒಂದೇ ಒಂದು ಕಿವಿ ಮಾತು ಏನೆಂದರೆ ದೂರದಿಂದಲೇ ಕಾವೇರಿಯ ಜಲನರ್ತನ ನೀರಿಗಿಳಿಯದೆ ಹಿಂತಿರುಗಿ.


Spread the love