ಮೈಸೂರಿನ ದಸರಾ ಸಡಗರ-ಸಂಭ್ರಮಕ್ಕೆ ಇಂದು ತೆರೆ

Spread the love

ಮೈಸೂರಿನ ದಸರಾ ಸಡಗರ-ಸಂಭ್ರಮಕ್ಕೆ ಇಂದು ತೆರೆ

ಮೈಸೂರು: ಮೈಸೂರು ದಸರಾ ಅಂದರೆ ರಾಜವೈಭವದ ಮೆರವಣಿಗೆ ಮಾತ್ರವಾಗಿರದೆ ಅದೊಂದು ಕಲೆ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ, ಮನರಂಜನೆಯ ಸಂಗಮವಾಗಿತ್ತು ಎನ್ನುವುದು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಗೊತ್ತಾಗಿ ಬಿಡುತ್ತದೆ. ಇವತ್ತಿನ ಕಾಲಘಟ್ಟದಲ್ಲಿ ದಸರಾ ಸಡಗರ ಸಂಭ್ರಮ, ಮನೋರಂಜನೆಯ ಭಾಗವಾಗಿಯೂ ವಹಿವಾಟಿನ ಕೇಂದ್ರವಾಗಿಯೂ ಸದಾ ದುಡಿಮೆಯಲ್ಲಿದ್ದವರಿಗೆ ಮನೋಲ್ಲಾಸದ ವೇದಿಕೆಯಾಗಿಯೂ ಗಮನಸೆಳೆಯುತ್ತಿದೆ. ಆದರೆ ಇದೆಲ್ಲ ಸಡಗರ ಸಂಭ್ರಮಕ್ಕೆ ಇಂದು ತೆರೆ ಬೀಳಲಿದೆ.

ಮೈಸೂರು ದಸರಾ ಎಷ್ಟೊಂದು ಸುಂದರಾ… ಎಂಬ ಹಾಡನ್ನು ಕೇಳಿದರೆ ಮೈಸೂರಿನ ದಸರಾದ ಹಿರಿಮೆ ಗರಿಮೆ ಎಲ್ಲವೂ ನಮ್ಮ ಕಣ್ಣಮುಂದೆ ಬಂದು ಬಿಡುತ್ತದೆ. ಅಷ್ಟೇ ಅಲ್ಲ ಕರ್ನಾಟಕದ ಸಂಸ್ಕೃತಿ ಅನಾವರಣದ ವೇದಿಕೆಯಾಗಿಯೂ ಸೆಳೆಯುತ್ತದೆ. ಇವತ್ತು ಒಂದಷ್ಟು ಬದಲಾವಣೆಯೊಂದಿಗೆ ದಸರಾ ಅಂದರೆ ಮನರಂಜನೆಯೊಂದಿಗೆ ಆರ್ಥಿಕ ವಹಿವಾಟಿಗೊಂದು ಮಾರುಕಟ್ಟೆಯಾಗಿಯೂ ಗಮನಸೆಳೆಯುತ್ತಿದೆ.

ನಾಲ್ಕು ಶತಮಾನಗಳ ದೀರ್ಘ ಇತಿಹಾಸದ ಮೈಸೂರು ದಸರಾ ಕಟ್ಟುಪಾಡು, ಸಂಸ್ಕೃತಿ, ಆಚರಣೆಯ ವಿಧಿವಿಧಾನಗಳನ್ನು ಚಾಚು ತಪ್ಪದೆ ನಡೆಸುತ್ತಾ ಬಂದಿದ್ದು, ಅದರ ಹೊರತಾಗಿ ದಸರಾ ಸುತ್ತಮುತ್ತ ಒಂದಷ್ಟು ಬದಲಾವಣೆ, ಹೊಸ, ಹೊಸ ಕಾರ್ಯಕ್ರಮಗಳ ಸೇರ್ಪಡೆ ಸೇರಿದಂತೆ ಒಂದಷ್ಟು ಅಭಿವೃದ್ಧಿಯನ್ನು ಕಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇವತ್ತು ಸರ್ಕಾರ ನಡೆಸುವ ದಸರಾದಲ್ಲಿ ಆಧುನಿಕತೆಗೆ ತಕ್ಕಂತೆ ದಸರಾ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಬದಲಾವಣೆಯಾಗಿದೆ. ಮತ್ತೊಂದಷ್ಟು ಸೇರ್ಪಡೆಯಾಗಿದೆ.

ಇದೆಲ್ಲದರ ನಡುವೆ ದಸರಾ ಸುತ್ತ ಇತಿಹಾಸದ ಹಿರಿಮೆ, ಸಾಂಸ್ಕೃತಿಕ ರಂಗುರಂಗಿನ ಗರಿಮೆ, ಬೆಡಗು ಭಿನ್ನಾಣ, ಹಾಡುಪಾಡು ಎಲ್ಲವೂ ಎದ್ದು ಕಾಣಿಸುತ್ತಿದೆ. ದಸರಾವನ್ನು ಗಮನಿಸಿದರೆ ಅದು ಹಬ್ಬವಾಗಿಯಾಗಲೀ, ಉತ್ಸವದಂತಾಗಲೀ ಕಾಣಿಸುವುದಿಲ್ಲ. ಅದು ಎಲ್ಲವನ್ನೂ ಮೀರಿದ ಒಂಭತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಸುಗ್ಗಿ ಎಂದರೂ ತಪ್ಪಾಗಲಾರದು.

ತಾಯಿ ಚಾಮುಂಡೇಶ್ವರಿಯ ಒಂಭತ್ತು ಅವತಾರಗಳ ಪೂಜಾ ಸಂಭ್ರಮವೂ ಇದಾಗಿದೆ. ಹತ್ತನೇಯ ದಿನದ “ವಿಜಯದಶಮಿ” ನಾಡ ಹಬ್ಬಕ್ಕೆ ಕಿರೀಟವಿಟ್ಟಂತೆ ನಡೆಯುತ್ತಿದೆ. ಬನ್ನಿಮರಕ್ಕೆ ಪೂಜೆ ಸಲ್ಲಿಸಲು ಸಾಗುವ ಚಿನ್ನದ ಅಂಬಾರಿ ಮೆರವಣಿಗೆ ಪ್ರತಿ ವರ್ಷಕ್ಕೂ ಇತಿಹಾಸದ ಬುತ್ತಿಯಾಗಿದೆ. ಒಂಭತ್ತು ದಿನಗಳ ಕಾಲ, ಸಾಹಿತ್ಯ, ಸಂಸ್ಕೃತಿ, ನಾಗರಿಕತೆ, ವಿಜ್ಞಾನ ತಂತ್ರಜ್ಞಾನಗಳ ಈ ರಸದೂಟವು ಮೈಸೂರು ದಸರಾಕ್ಕೆ ಮೆರಗು ತಂದಿರುವುದು ವಿಶೇಷ.

ಇದುವರೆಗೆ ಮೈಸೂರು ದಸರಾದಲ್ಲಿ ಹತ್ತಾರು ರೀತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರು ಅದೆಲ್ಲದಕ್ಕೆ ತೆರೆ ಎಳೆದ ಬಳಿಕ ಇದೀಗ ಜಂಬೂಸವಾರಿಯತ್ತ ನೋಟ ನೆಟ್ಟಿದ್ದಾರೆ. ಸಂಜೆ ಹೊತ್ತಿಗೆ ಜಂಬೂಸವಾರಿ ಅರಮನೆಯಿಂದ ಹೊರಟು ಬನ್ನಿಮಂಟಪ ತಲುಪಲಿದ್ದು, ಅಲ್ಲಿ ಪಂಜಿನ ಕವಾಯಿತಿನೊಂದಿಗೆ ಈ ವರ್ಷದ ಮೈಸೂರು ದಸರಾಕ್ಕೆ ತೆರೆ ಬೀಳಲಿದೆ. ದಸರಾದ ಆ ಸಂಭ್ರಮ ಮರುಕಳಿಸಬೇಕಾದರೆ ಮುಂದಿನ ದಸರಾ ತನಕ ಕಾಯಬೇಕಿದೆ.


Spread the love