ಮೈಸೂರಿನ ಫುಟ್ಭಾಲ್ ಆಟಗಾರ ಇಟಲಿಯಲ್ಲಿ ಸಾವು

Spread the love

ಮೈಸೂರಿನ ಫುಟ್ಭಾಲ್ ಆಟಗಾರ ಇಟಲಿಯಲ್ಲಿ ಸಾವು

ಮೈಸೂರು: ಮೈಸೂರಿನ ಕ್ರೀಡಾಪಟು ಜಲಪಾತ ವೀಕ್ಷಣೆ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಇಟಲಿಯ ರೋಮ್‌ನಲ್ಲಿ ನಡೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಎನ್.ಆರ್ ಮೊಹಲ್ಲಾದ ನಿವಾಸಿ ಎನ್ ಕುಮಾರ್ ಹಾಗೂ ರೂಪಾ ದಂಪತಿಯ ಪುತ್ರ ಯಶವಂತ ಕುಮಾರ್(25) ರೋಮ್ ನಲ್ಲಿ ಮೃತಪಟ್ಟ ಫುಟ್ಭಾಲ್ ಆಟಗಾರನಾಗಿದ್ದಾನೆ. ಈತ ವಿದ್ಯಾವರ್ಧಕ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಅಂತರಾಷ್ಟ್ರೀಯ ಸೀರಿ ಬಿ ಫುಟ್ಭಾಲ್ ಲೀಗ್‌ಗಾಗಿ ಕ್ಯಾಲ್ಸಿಯೊ ಸಿ 5 ತಂಡಗಳೊಂದಿಗೆ ಭಾಗವಹಿಸಲು ಇಟಲಿಗೆ ತೆರಳಿದ್ದನು.

ಈ ನಡುವೆ ಆಗಸ್ಟ್ 6ರಂದು ರೋಮ್‌ನಲ್ಲಿದ್ದ ಜಲಪಾತವನ್ನು ವೀಕ್ಷಿಸುವ ಸಲುವಾಗಿ ತೆರಳಿದ್ದನು. ಈ ವೇಳೆ ಜಲಪಾತದ ಬಳಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿತ್ತಾದರೂ ಅದು ಮೈಸೂರಿನಲ್ಲಿರುವ ಆತನ ಪೋಷಕರಿಗೆ ಗೊತ್ತಾಗಿರಲಿಲ್ಲ. ಅಲ್ಲಿನ ಪೊಲೀಸರಿಗೆ ಸರಿಯಾದ ಮಾಹಿತಿ ದೊರೆಯದ ಕಾರಣ ಪೋಷಕರಿಗೆ ತಿಳಿಸಿರಲಿಲ್ಲ. ನಂತರ ಮೃತದೇಹದ ಬೆರಳಚ್ಚಿನ ಆಧಾರದ ಮೇಲೆ ಗುರುತು ಪತ್ತೆ ಹಚ್ಚಿದ್ದಲ್ಲದೆ, ದೇಹಕೊಳೆತಿದ್ದರಿಂದ ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎನ್ನಲಾಗಿದೆ. ಇದೀಗ ಸಾವಿನ ಸುದ್ದಿ ಕೇಳಿ ಪೋಷಕರ ದುಃಖದ ಕಟ್ಟೆಯೊಡೆದಿದ್ದು ಮಗನ ಅಸ್ಥಿ ಬರಬಹುದೆಂಬ ನಿರೀಕ್ಷೆಯಲ್ಲಿ ಕಣ್ಣೀರಿಡುತ್ತಾ ಕಾಯುತ್ತಿದ್ದಾರೆ.


Spread the love