ಮೈಸೂರಿನ ರಂಗಾಯಣದಲ್ಲಿ ರಂಗಹಬ್ಬಕ್ಕೆ ಸರ್ವ ಸಿದ್ಧತೆ

Spread the love

ಮೈಸೂರಿನ ರಂಗಾಯಣದಲ್ಲಿ ರಂಗಹಬ್ಬಕ್ಕೆ ಸರ್ವ ಸಿದ್ಧತೆ

ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ರಂಗಾಯಣ ಸಜ್ಜಾಗಿದ್ದು, ಡಿ.8ರಿಂದ 7 ದಿನಗಳ ಕಾಲ ಜನಪದ ಉತ್ಸವದೊಂದಿಗೆ ರಾಷ್ಟ್ರೀಯ ನಾಟಕೋತ್ಸವ ಆರಂಭಗೊಳ್ಳಲಿದೆ.

ಡಿ.8ರಿಂದ 15ರವರೆಗೆ ನಡೆಯುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವೇದಿಕೆಗಳ ವಿನ್ಯಾಸ, ಆವರಣ ಸ್ವಚ್ಛತಾ ಕಾರ್ಯ, ನಾಟಕಗಳ ತಾಲೀಮು, ಮಳಿಗೆಗಳ ನಿರ್ಮಾಣ, ಚಿತ್ರಕಲಾ ಶಿಬಿರ ಸೇರಿದಂತೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಭಾರತೀಯತೆ ಪರಿಕಲ್ಪನೆ ಅಡಿಯಲ್ಲಿ ನಾಟಕಗಳು ಸೇರಿದಂತೆ ಜಾನಪದ ಕಲಾಪ್ರದರ್ಶನ, ರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತುಪ್ರದರ್ಶನ, ದೇಸಿ ಆಹಾರ ಮೇಳ ಮತ್ತು ಪ್ರಾತ್ಯಕ್ಷಿಕೆಗಳು, ಚಿತ್ರಕಲಾ ಶಿಬಿರಒಳಗೊಂಡಂತೆ ರಂಗೋತ್ಸವ ರೂಪಿಸಲಾಗಿದೆ. ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಹಾಗೂ ಪುಸ್ತಕ ಮಾರಾಟದ ಮಳಿಗೆಗಳ ನಿರ್ಮಾಣ ಕಾರ್ಯ ನಡೆದಿದ್ದರೆ, ರಂಗ ವಿನ್ಯಾಸಕ ದ್ವಾರಕನಾಥ್ ನೇತೃತ್ವದಲ್ಲಿ ಹತ್ತಾರು ಕಲಾವಿದರು ಭಾರತೀಯತೆ ಪರಿಕಲ್ಪನೆ ಅಡಿಯಲ್ಲಿ ಪೋಸ್ಟರ್ ಹಾಗೂ ಭಿತ್ತಿಚಿತ್ರಗಳನ್ನು ತಯಾರು ಮಾಡುತ್ತಿದ್ದಾರೆ. ಜತೆಗೆ ಕಾರ್ಯಕ್ರಮ ನಡೆಯಲಿರುವ ವೇದಿಕೆಗಳನ್ನು ಸಿದ್ಧ ಮಾಡಲಾಗಿದೆ. ಕಲಾವಿದರು ಸಿದ್ಧ ಮಾಡುತ್ತಿರುವ ಪೋಸ್ಟರ್ ಹಾಗೂ ಭಿತ್ತಿಚಿತ್ರಗನ್ನು ರಂಗಾಯಣದ ಅಂಗಳದ ಎಲ್ಲ ಕಡೆ ಅಳವಡಿಸಲಾಗುತ್ತಿದೆ.

ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ 60 ಮಳಿಗೆಗಳು ತಲೆ ಎತ್ತುತ್ತಿವೆ. ದೇಶದ ನಾನಾ ಭಾಗಗಳಿಂದ ಕುಶಲಕರ್ಮಿಗಳು ರಂಗೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ಪೈಕಿ ಕರಕುಶಲ ಮತ್ತು ಬಟ್ಟೆಗಾಗಿ 15 ಮಳಿಗೆ, ದೇಸಿ ಆಹಾರಕ್ಕಾಗಿ 15ಕ್ಕೂ ಹೆಚ್ಚಿನ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ. ಸಹಜ ಕೃಷಿ ಆಹಾರಗಳು, ಮೈಸೂರು ಶೈಲಿ, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ವಿಶೇಷ ಬಗೆ ಬಗೆಯ ಆಹಾರ ಪದಾರ್ಥಗಳ ಘಮಲು ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಉತ್ತರ ಕನ್ನಡ ತಿನಿಸು ತೊಡದೇವು, ದಾವಣಗೆರೆ ಬೆಣ್ಣೆ ದೊಸೆ, ಗೋಕಾಕ್ ಕರದಂಟು, ಹಾಲು ಬಾಯಿ ಇರಲಿದೆ. ಪುಸ್ತಕ ಪ್ರದರ್ಶನಕ್ಕೆ 15ಮಳಿಗೆಗಳನ್ನು ತೆರೆಯಲಾಗಿದೆ.

ಪ್ರತಿದಿನ ಉತ್ಸವಕ್ಕೆ ಆಗಮಿಸುವ 200ರಿಂದ 250ಕಲಾವಿದರು, ಗಣ್ಯರಿಗಾಗಿ ನಗರದ ಖಾಸಗಿ ಹೋಟೆಲ್‌ಗಳು ಹಾಗೂ ಸರ್ಕಾರಿ ಗೆಸ್ಟ್‌ಹೌಸ್‌ಗಳನ್ನು ಕಾಯ್ದಿರಿಸಲಾಗಿದೆ. ಗೆಸ್ಟ್‌ಹೌಸ್‌ಗಳಿಂದ ರಂಗಾಯಣಕ್ಕೆ ಕರೆತರಲು ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.


Spread the love