ಮೈಸೂರಿನ ರೌಡಿಶೀಟರ್ ಆರ್‌ ಎಕ್ಸ್ ಮನು ಗಡಿಪಾರು

Spread the love

ಮೈಸೂರಿನ ರೌಡಿಶೀಟರ್ ಆರ್‌ ಎಕ್ಸ್ ಮನು ಗಡಿಪಾರು

ಮೈಸೂರು: ನಗರದ ಬನ್ನಿಮಂಟಪ ಬಳಿಯ ಹುಡ್ಕೋ ಬಡಾವಣೆ ನಿವಾಸಿ ಹಾಗೂ ರೌಡಿ ಶೀಟರ್ ಮನೋಜ್ ಕುಮಾರ್ ಆಲಿಯಾಸ್ ಆರ್‌ಎಕ್ಸ್ ಮನು ಎಂಬಾತನನ್ನು ಪೊಲೀಸ್ ಆಯುಕ್ತರು ಗಡಿಪಾರು ಮಾಡಿದ್ದು, ಈ ಮೂಲಕ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರೌಡಿ ಚಟುವಟಿಕೆಗಳಲ್ಲಿ ಹೆಚ್ಚು ಭಾಗಿಯಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ಆತನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದರಿಂದ ಆತನನ್ನು ಪೊಲೀಸರು ಗಡಿಪಾರು ಮಾಡಿದ್ದಾರೆ. ಮೈಸೂರು ನಗರ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಪ್ರದೀಪ್ ಗುಂಟಿ ಅವರ ಆದೇಶದ ಮೇರೆಗೆ ನರಸಿಂಹರಾಜ ಠಾಣೆ ಪೊಲೀಸರು ಗಡೀಪಾರು ಆದೇಶ ಜಾರಿಗೊಳಿಸಿದ್ದಾರೆ. ಒಂದು ತಿಂಗಳ ಕಾಲ ಮನು ಗಡಿಪಾರು ಶಿಕ್ಷೆ ಅನುಭವಿಸಬೇಕಿದೆ.

ಇನ್ನು ಬನ್ನಿಮಂಟಪ ಹುಡ್ಕೋ ಬಡಾವಣೆಯ ನಿವಾಸಿ ರೌಡಿ ಶೀಟರ್ ಮನೋಜ್ ಕುಮಾರ್ ಆಲಿಯಾಸ್ ಆರ್‌ಎಕ್ಸ್ ಮನು ಮೇಲೆ ನಗರದ ನರಸಿಂಹರಾಜ, ಲಷ್ಕರ್, ವಿಜಯನಗರ, ಮಂಡಿ, ಲಕ್ಷ್ಮಿಪುರಂ, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ತೀವ್ರ ಹಲ್ಲೆ, ಕೊಲೆಯತ್ನ ಪ್ರಕರಣಗಳು ದಾಖಲಾಗಿವೆ. ನಗರ ಪೊಲೀಸ್ ಆಯುಕ್ತರಾಗಿ ಬಿ.ರಮೇಶ್ ಅಧಿಕಾರ ವಹಿಸಿಕೊಂಡಾಗಿನಿಂದ ರೌಡಿ ಚಟುವಟಿಕೆ ಹತ್ತಿಕ್ಕುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೀವ್ರ ಗೊಳಿಸಿದ್ದಾರೆ. ಪ್ರತಿದಿನ ನಗರದಾದ್ಯಂತ ವಿಶೇಷ ತಪಾಸಣಾ ಅಭಿಯಾನ ನಡೆಸಿ ವಾಹಗಳಲ್ಲಿ ಲಾಂಗ್, ಮಚ್ಚು, ಡ್ರ್ಯಾಗರ್ ಇತ್ಯಾದಿ ಮಾರಕಾಸ್ತ್ರಗಳನ್ನು ತಮ್ಮ ವಾಹನಗಳಲ್ಲಿ ಇಟ್ಟುಕೊಂಡು ಓಡಾಡುವ ವ್ಯಕ್ತಿಗಳನ್ನು ಪತ್ತೆ ಮಾಡಿ ಕ್ರಮ ವಹಿಸುತ್ತಿದ್ದಾರೆ.

ರಾತ್ರಿ ಸಮಯದಲ್ಲಿ ನಗರ ಪ್ರವೇಶಿಸುವ ಪ್ರತಿ ವಾಹನಗಳನ್ನು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಲಾಗುತ್ತಿದೆ. ನಗರದಲ್ಲಿ ಕಟ್ಟೆಚ್ಚರ ವಹಿಸಿದ್ದು ರಾತ್ರಿಗಸ್ತು ತೀವ್ರ ಗೊಳಿಸಲಾಗಿದೆ. ಇತ್ತೀಚೆಗೆ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ನಗರದ ಜನರ ಸುರಕ್ಷತೆ ಹಾಗೂ ಅವರ ಹಿತದೃಷ್ಟಿಯಿಂದ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇದೀಗ ರೌಡಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಮಾಜಘಾತುಕರ ವಿರುದ್ಧ ಗಡಿಪಾರಿನಂತಹ ಕಠಿಣ ಕ್ರಮಕ್ಕೆ ಕೈ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೌಡಿಗಳಿಗೆ ಶಾಕ್ ನೀಡಲಿದ್ದಾರೆ.


Spread the love