ಮೈಸೂರು: ಅದ್ಧೂರಿ ಚಾಮುಂಡಿ ಮಹಾರಥೋತ್ಸವ

Spread the love

ಮೈಸೂರು: ಅದ್ಧೂರಿ ಚಾಮುಂಡಿ ಮಹಾರಥೋತ್ಸವ

ಮೈಸೂರು: ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಭಕ್ತರಿಲ್ಲದೆ ಸರಳವಾಗಿ ನಡೆದಿದ್ದ ತಾಯಿ ಚಾಮುಂಡೇಶ್ವರಿಯ ರಥೋತ್ಸವ ಭಾನುವಾರ ಅದ್ಧೂರಿಯಾಗಿ ನಡೆಯಿತು.

ಈ ವೇಳೆ ನೆರೆದಿದ್ದ ಸಹಸ್ರಾರು ಮಂದಿ ಭಕ್ತರು ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಸಿಕೊಂಡು ಕೃತಾರ್ಥರಾದರು. ರಥೋತ್ಸವದ ಹಿನ್ನಲೆಯಲ್ಲಿ ಮುಂಜಾನೆಯಿಂದಲೇ ದೇಗುಲದಲ್ಲಿ ತಾಯಿಚಾಮುಂಡೇಶ್ವರಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ಸಿಂಹವಾಹಿನಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿ ದೇವಿಗೆ ಬೆಳಿಗ್ಗೆ 7.10ರಿಂದ 8.10ರ ಶುಭ ಮುಹೂರ್ತದಲ್ಲಿ ವಿಶೇಷ ಪೂಜೆ, ಮಂಟಪ ಉತ್ಸವಗಳು ನೆರವೇರಿದವು.

ಆ ನಂತರ ಬೆಳಿಗ್ಗೆ 8.10ಕ್ಕೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ, ಶಾಸಕ ಜಿ.ಟಿ.ದೇವೇಗೌಡ ಅವರು, ಪೂಜೆ ಸಲ್ಲಿಸಿದ ಬಳಿಕ ಉತ್ಸವದ ಮೂರ್ತಿಯನ್ನು ರಥದೊಳಗೆ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿದರು.

ಇದಾದ ಬಳಿಕ ಯದುವೀರ್ ಅವರು ರಥದ ಹಗ್ಗ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆಯೇ ತಾಯಿ ಚಾಮುಂಡೇಶ್ವರಿ ಜಯವಾಗಲಿ ಎಂಬ ಘೋಷಣೆಯನ್ನು ಮೊಳಗಿಸಿದರು. ಸಿಡಿಮದ್ದಿನ ಸದ್ದು, ವಾದ್ಯಗೋಷ್ಠಿಗಳ ನಾದ, ಕಲಾತಂಡಗಳು ಪ್ರದರ್ಶನವು ರಥೋತ್ಸವದ ರಂಗು ಹೆಚ್ಚಿಸಿತು. ರಥಬೀದಿಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತಸಾಗರದ ಮಧ್ಯೆ ಚಾಮುಂಡೇಶ್ವರಿ ರಥ ಸಾಗಿತು.

ಈ ಸಂದರ್ಭ ಭಕ್ತರು ಹಣ್ಣು- ಜವನವನ್ನು ರಥದತ್ತ ಎಸೆದು ಭಕ್ತಿ ಸಮರ್ಪಿಸಿದರು. 50 ನಿಮಿಷಗಳವರೆಗೆ ಸಾಗಿ ಬಂದ ರಥ ಚಾಮುಂಡೇಶ್ವರಿ ದೇವಸ್ಥಾನದ ಪ್ರವೇಶದ್ವಾರ ತಲುಪುವ ವೇಳೆಗೆ 9 ಗಂಟೆ ತಲುಪಿತ್ತು. ಈ ವೇಳೆ ಅಲ್ಲಿ ನೆರೆದಿದ್ದ ಭಕ್ತರು, ರಥದ ಹಗ್ಗ ಮುಟ್ಟಿ ಪುನೀತರಾದರು. ಮತ್ತೆ ಕೆಲವರು, ರಥಕ್ಕೆ ನಮಸ್ಕರಿಸಿದರು. ರಥಕ್ಕೆ ಸಿಂಗರಿಸಲಾಗಿದ್ದ ಹೂವುಗಳನ್ನು ಪಡೆಯಲು ಮುಗಿಬಿದ್ದರು.

ರಥೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಈ ವೇಳೆ ರಥದ ಮುಂಭಾಗದಲ್ಲಿ ನೆರೆದಿದ್ದವರ ಪೈಕಿ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಫೋಟೊ ಇದ್ದ ಬಾವುಟ ಹಾರಿಸಿ ಅಭಿಮಾನ ಮೆರೆದರು.


Spread the love