ಮೈಸೂರು ದಸರಾದಲ್ಲಿ ದೀಪಾಲಂಕಾರ ಐದು ದಿನ ವಿಸ್ತರಣೆ

Spread the love

ಮೈಸೂರು ದಸರಾದಲ್ಲಿ ದೀಪಾಲಂಕಾರ ಐದು ದಿನ ವಿಸ್ತರಣೆ

ಮೈಸೂರು: ಈ ಬಾರಿ ದೀಪಾಲಂಕಾರವನ್ನು ಹೆಚ್ಚುವರಿಯಾಗಿ ಐದು ದಿನಗಳ ಕಾಲ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ದಸರಾ ದೀಪಾಲಂಕಾರ ಸಮಿತಿ ಅಧ್ಯಕ್ಷ ರಾದ ಟಿ.ರಮೇಶ್ ಅವರು ತಿಳಿಸಿದರು.

ಮೈಸೂರಿನ ವಿಜಯನಗರದ ಚೆಸ್ಕಾಂ ಕೇಂದ್ರ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾಲಂಕಾರಕ್ಕೆ ಈಗಾಗಲೇ ಉತ್ತಮ ಜನಸ್ಪಂದನೆ ದೊರೆತಿದೆ. 124 ಕಿ.ಮೀ ಇರುವ ದೀಪಾಲಂಕಾರಕ್ಕೆ ಇನ್ನೂ ಹೆಚ್ಚುವರಿ 6 ಕಿ.ಮೀ ದೀಪಾಲಂಕಾರ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಹೆಚ್ಚುವರಿಯಾಗಿ 5 ವೃತ್ತದಲ್ಲಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ದೀಪಾಲಂಕಾರ ಉಪಸಮಿತಿ ವಿಶೇಷಾಧಿಕಾರಿಯಾಗಿರುವ ಚೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯವಿಭವಸ್ವಾಮಿ ಅವರು ಮಾತನಾಡಿ, ಪ್ರತಿಮೆಗಳಿಗೆ ತ್ರಿಡಿ ದೀಪಾಲಂಕಾರ ಮಾಡಲಾಗಿದ್ದು, ಪ್ರತಿ ಹತ್ತು ನಿಮಿಷದಲ್ಲಿ ಒಂದು ನಿಮಿಷ ಆಫ್ ಆನ್ ಆಗುವಂತಹ ಸ್ವಯಂಚಾಲಿತ ತಂತ್ರಜ್ಞಾನ ಅಳವಡಿಸಲಾಗಿದೆ. ಹೀಗಾಗಿ, ದೀಪಾಲಂಕಾರದ ಬೆಳಕಿನ ವಿಚಾರದಲ್ಲಿ ಯಾವುದೇ ಲೋಪದೋಷವಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದೆಂದೂ ಮಾಡಿರದಷ್ಟು ದೀಪಾಲಂಕಾರ ಮಾಡಿದ್ದು, ವಿಶೇಷವಾಗಿ ಚಾಮುಂಡಿ ಬೆಟ್ಟದ ತಪ್ಪಲಿನಿಂದ ದೇವಾಲಯದವರೆಗೆ ದೀಪಾಲಂಕಾರ ಅಳವಡಿಸಲಾಗಿದೆ. 28 ಪ್ರತಿಕೃತಿಗಳು ಜನರನ್ನು ಆಕರ್ಷಿಸುತ್ತಿವೆ. 10.30 ರವೆಗೆ ದೀಪಾಲಂಕಾರ ವೀಕ್ಷಣೆಯನ್ನು ವಿಸ್ತರಿಸಿರುವುದರಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸ್ ನವರು ಮಾಹಿತಿ ನೀಡಿದ್ದಾರೆ ಎಂದರು.

ಡಿ.ದೇವರಾಜು ಅರಸು ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೆಲವೊಂದು ಸಮಸ್ಯೆಯಾಗಿತ್ತು ಅದನ್ನು ಸರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಬಾರಿ ದೀಪಾಲಂಕಾರ ವಿಭಿನ್ನತೆ,ವಿಶೇಷತೆಗಳ ಬಗ್ಗೆ ವಿದೇಶದಿಂದಲೂ ಮೆಚ್ಚುಗೆಯ ಸ್ಪಂದನೆ ದೊರೆಯುತ್ತಿದೆ. ಒಂದು ದಿನಕ್ಕೆ ಅಂದಾಜು 40 ಲಕ್ಷ ರೂ. ವೆಚ್ಚ ಭರಿಸಲಾಗುತ್ತಿದ್ದು,ಅವಧಿ ವಿಸ್ತರಣೆ ಸಂಬಂಧ ಸರ್ಕಾರ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದರು.

ದೀಪಾಲಂಕಾರ ಉಪಸಮಿತಿ ಉಪಾಧ್ಯಕ್ಷ ಪುನೀತ್, ಸದಸ್ಯರಾದ ಶ್ರೀಧರ್, ವಿಕ್ರಾಂತ್ ಪಿ.ದೇವೇಗೌಡ, ವೇಣು ಸೇರಿದಂತೆ ಚೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love