ಮೈಸೂರು ದಸರಾದಲ್ಲಿ ಮನ ತಣಿಸುವ ಮನೆಬೆಳಗುವ ಬೊಂಬೆಗಳು

Spread the love

ಮೈಸೂರು ದಸರಾದಲ್ಲಿ ಮನ ತಣಿಸುವ ಮನೆಬೆಳಗುವ ಬೊಂಬೆಗಳು

ಮೈಸೂರಿನಲ್ಲಿ ನವರಾತ್ರಿ ಸಡಗರ ಆರಂಭವಾಗಿದೆ ಹೊರಗೆ ಇಡೀ ನಗರ ಸಡಗರ ಸಂಭ್ರಮದಲ್ಲಿ ತೇಲುತ್ತಿದ್ದರೆ ಒಳಗೆ ಮನೆ ಮನೆಗಳಲ್ಲಿ ಬೊಂಬೆಗಳ ದರ್ಬಾರ್ ಸಾಗಿದೆ. ಪ್ರತಿದಿನವೂ ಬೊಂಬೆಗಳಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆಗಳು ನಡೆಯುತ್ತಿವೆ. ಮಹಿಳೆಯರು ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ನವರಾತ್ರಿ ಸಂದರ್ಭದಲ್ಲಿ ಮಹಿಳೆಯರು ತಮ್ಮ ಮನೆಗಳಲ್ಲಿ ವಿವಿಧ ಬಣ್ಣದ, ನಮೂನೆಯ ಗೊಂಬೆಗಳನ್ನಿಟ್ಟು ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಲಾಗುತ್ತದೆ. ಇದು ರಾಜ್ಯದಾದ್ಯಂತ ನಡೆಯುತ್ತದೆ. ಆದರೆ ಮೈಸೂರಿನಲ್ಲಿ ಮಾತ್ರ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಸಂಸ್ಕೃತಿಗೆ ಪೂರಕವಾಗಿರುವ ಈ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಈ ಬೊಂಬೆ ಕೂರಿಸಿ ಪೂಜಿಸುವ ಸಂಪ್ರದಾಯ ಪಾಡ್ಯದಿಂದ ಆರಂಭವಾಗಿ ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಠಮಿ, ನವಮಿ ತನಕ ಒಂಬತ್ತು ದಿನಗಳ ಕಾಲ ನಡೆಯುತ್ತದೆ. ಇತರೆ ದಿನಗಳಲ್ಲಿ ಮನೆಯ ಶೋಕೇಶ್‌ನಲ್ಲಿರುವ ಗೊಂಬೆಗಳು ನವರಾತ್ರಿ ಬರುತ್ತಿದ್ದಂತೆಯೇ ದೇವರಕೋಣೆಯಲ್ಲಿ ಪೂಜ್ಯ ಸ್ಥಾನ ಪಡೆಯುತ್ತವೆ. ಕೆಲವರು ಮಣ್ಣು, ಗಾಜು, ಉಲ್ಲಾನ್, ಪ್ಲಾಸ್ಟಿಕ್, ಪಿಂಗಾಣಿ, ಇನ್ನಿತರೆ ವಸ್ತುಗಳಿಂದ ತಯಾರಿಸಿದ ಗೊಂಬೆಗಳನ್ನು ಮನೆಯಲ್ಲಿ ಕೂರಿಸಿದರೆ ಮತ್ತೆ ಕೆಲವರು ಮಣ್ಣಿನಿಂದಲೇ ಮಾಡಿದ ಗೊಂಬೆಗಳನ್ನು ಕೂರಿಸಿ ಪೂಜಿಸುತ್ತಾರೆ.

ನವರಾತ್ರಿಯಲ್ಲಿ ಬೊಂಬೆ ಪ್ರದರ್ಶನ ಮಾಡುವುದು ಎಲ್ಲೆಡೆ ನಡೆದುಕೊಂಡು ಬರುತ್ತಿತ್ತಾದರೂ ಮೈಸೂರಿನಲ್ಲಿ ಅದಕ್ಕೊಂದು ಸ್ಥಾನಮಾನ ನೀಡಿದ್ದು ಮೈಸೂರು ಮಹಾರಾಜರಾಗಿದ್ದ ರಾಜಒಡೆಯರು. ಅವರು ತಮ್ಮ ಆರಾಧನೆಯಲ್ಲಿ ಗೊಂಬೆಗೂ ಒಂದು ಮಹತ್ವದ ಸ್ಥಾನ ನೀಡಿ ನಾಡಹಬ್ಬ ನವರಾತ್ರಿಯಲ್ಲಿ ದಸರಾ ಮೆರವಣಿಗೆಯಂತೆಯೇ ಬೊಂಬೆಗೂ ವಿಶೇಷ ಸ್ಥಾನ ಕಲ್ಪಿಸಿದರು. ನವರಾತ್ರಿಯ ಒಂಬತ್ತು ದಿನವೂ ಅರಮನೆಯಲ್ಲಿ ವಿವಿಧ ಬೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸುವುದು ಅವರ ಆಡಳಿತಾವಧಿಯಿಂದ ಮುಂದುವರೆದು ಬಂತೆಂದು ಹೇಳಲಾಗಿದೆ.

ಸಾಮಾನ್ಯವಾಗಿ ಬೊಂಬೆ ಪ್ರದರ್ಶನ ಎಲ್ಲೆಡೆ ನಡೆಯುತ್ತದೆಯಾದರೂ ಮೈಸೂರು ದಸರಾದಲ್ಲಿ ಅದಕ್ಕೊಂದು ಗೌರವದ ಸ್ಥಾನ ನೀಡಿದವರು ಮೈಸೂರನ್ನು ಆಳಿದ ಮಹಾರಾಜರಾದ ರಾಜ ಒಡೆಯರ್. ಅವರು 1610ರಲ್ಲಿ ದಸರಾ ಆರಂಭಿಸಿದ್ದು ಆ ನಂತರ ಅರಮನೆಯಲ್ಲಿ ಬೊಂಬೆಪ್ರದರ್ಶನ ಮಾಡುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಅದು ಇವತ್ತಿಗೂ ಮುಂದುವರೆಯುತ್ತಾ ಬಂದಿದೆ.

ಮನೆಗಳಲ್ಲಿ ಪ್ರತಿಷ್ಠಾಪಿಸುವ ಬೊಂಬೆಗಳಲ್ಲಿ ವಿಭಿನ್ನತೆ ಇದೆ. ಅವರವರ ಶಕ್ತಿ ಸಾಮರ್ಥ‍್ಯಕ್ಕನುಗುಣವಾಗಿ ಬೊಂಬೆಗಳನ್ನು ಕೂರಿಸಲಾಗುತ್ತದೆ. ಕೆಲವರಿಗೆ ಬೊಂಬೆಗಳನ್ನು ಸಂಗ್ರಹಿಸುವುದೇ ಒಂದು ಹವ್ಯಾಸವಾಗಿದ್ದು ಅಂತಹವರು ತಮ್ಮ ಸಂಗ್ರಹದಲ್ಲಿ ಪುರಾಣಕ್ಕೆ ಸಂಬಂಧಿಸಿದ ದೇವರ ಬೊಂಬೆಗಳನ್ನು ಸಂಗ್ರಹಿಸಿಟ್ಟು ಅವುಗಳನ್ನು ಜೋಡಿಸಿಟ್ಟು ಆ ಮೂಲಕ ಬೊಂಬೆಗಳಿಂದಲೇ ಪೌರಾಣಿಕ ಕಥೆ ಹೇಳುತ್ತಿವೆಯೇನೋ ಎಂಬಂತೆ ಮಾಡುತ್ತಾರೆ.

ಈ ಬೊಂಬೆ ಕೂರಿಸುವುದರಲ್ಲಿಯೂ ಶಿಸ್ತು, ಸಂಪ್ರದಾಯವಿದೆ. ಗೊಂಬೆಗಳು ಸಾಮಾನ್ಯವಾಗಿ ಪುರಾಣದ ಕಥೆಗಳನ್ನು, ನಾಡಿನ ಪರಂಪರೆಯನ್ನು ಸಾರುತ್ತಿರುತ್ತವೆ. ಈಶ್ವರ, ಗಣಪತಿ, ಲಕ್ಷ್ಮಿ, ಸರಸ್ವತಿ, ದುರ್ಗಿ ಮೊದಲಾದ ದೇವರ ಮೂರ್ತಿಗಳನ್ನೂ, ದುಷ್ಟ ಸಂಹಾರಕ್ಕೆ ಸಂಬಂಧಿಸಿದ ಕಥಾ ಹಿನ್ನಲೆಗಳನ್ನು ಹೊಂದಿರುವ ಗೊಂಬೆಗಳನ್ನು ಇಲ್ಲಿ ಪ್ರತಿಷ್ಠಾಪಿಸುವುದು ವಿಶೇಷವಾಗಿದೆ.

ಹಿಂದಿನ ಕಾಲದಲ್ಲಿ ಮಕ್ಕಳಿಗೆ ಈಗಿನ ಕಾಲದಂತೆ ಮನೋರಂಜನೆಗೆ ಯಾವುದೇ ಆಧುನಿಕ ಆಟಿಕೆಗಳಿರಲಿಲ್ಲ. ಹಾಗಾಗಿ ಮಕ್ಕಳು ಬಾಲ್ಯದಿಂದಲೇ ಗೊಂಬೆಗಳೊಂದಿಗೆ ಆಡುತ್ತಾ ಬೆಳೆಯುತ್ತಿದ್ದರು. ಅಲ್ಲದೆ, ಬಾಲ್ಯವಿವಾಹವೂ ನಡೆಯುತ್ತಿದ್ದ ಕಾಲವಾದುದರಿಂದ ಹೆತ್ತವರು ಮಗಳನ್ನು ಮದುವೆ ಮಾಡಿಕೊಡುವಾಗ ಆಟವಾಡುತ್ತಿದ್ದ ಗೊಂಬೆಗಳನ್ನು ಸಹ ಜೊತೆಯಲ್ಲಿಯೇ ನೀಡುತ್ತಿದ್ದರು. ಅಲ್ಲದೆ ವರ್ಷಕ್ಕೊಮ್ಮೆ ಈ ಗೊಂಬೆಗಳನ್ನು ಒಂದೆಡೆ ಪ್ರತಿಷ್ಠಾಪಿಸಿ ಅದಕ್ಕೆ ಆರತಿ ಬೆಳಗಿ ಪೂಜಿಸುವಂತೆ ಹೇಳುತ್ತಿದ್ದರೆಂದೂ ಅದರಂತೆ ಈ ಗೊಂಬೆ ಹಬ್ಬ ರೂಢಿಗೆ ಬಂದಿರಬಹುದೆಂದು ಅಭಿಪ್ರಾಯಪಡಲಾಗಿದೆ.

ಇನ್ನು ಈ ಬೊಂಬೆಗಳಿಗೂ ಮೈಸೂರು ಮಹಾರಾಜರಿಗೆ ಅವಿನಾಭಾವ ಸಂಬಂಧವಿದೆ. ರಾಜ ಒಡೆಯರ್ ಕಲಾ ಪೋಷಕರಾಗಿದ್ದು, ಅವರ ಕಾಲದಲ್ಲಿ ಅರಮನೆಯಲ್ಲಿ ದರ್ಬಾರ್ ಹಾಲ್, ಚಿತ್ರಶಾಲೆ, ವಿವಾಹ ಮಂಟಪ, ಭೋಜನ ಶಾಲೆ, ಶಸ್ತ್ರಗಾರವಿರುವಂತೆ ಬೊಂಬೆಗಳ ಪ್ರದರ್ಶನಕ್ಕೂ ಒಂದು ಪ್ರತ್ಯೇಕ ಸ್ಥಳವನ್ನು ಮೀಸಲಿರಿಸಿ ಬೊಂಬೆಗಳಿಗೆ ಅಗ್ರಸ್ಥಾನ ನೀಡಿದರು. ಅರಮನೆಯಲ್ಲಿ ಬೊಂಬೆಗಳ ಸಂಗ್ರಹಗಾರವಾಗಿರುವ ’ತೊಟ್ಟಿಮನೆ’ಯಿದ್ದು, ಈ ತೊಟ್ಟಿಮನೆಯಲ್ಲಿ ಗತಕಾಲದ ಕಲಾತ್ಮಕತೆಯನ್ನು ಸಾರುವ ದಂತ, ಶ್ರೀಗಂಧದ ಮರ ಸೇರಿದಂತೆ ಬೆಲೆಬಾಳುವ ಮರಗಳಿಂದ ಕೆತ್ತಿದ ಅಪೂರ್ವ ಬೊಂಬೆಗಳು ಸಾಕ್ಷಿಯಾಗಿವೆ.

ಮೈಸೂರು ರಾಜಒಡೆಯರ ಪ್ರತೀಕವೆಂಬಂತೆ ಅವರಿಗೆ ಗೌರವ ಸೂಚಕವಾಗಿ ಪ್ರತಿ ಮನೆಮನೆಯ ಬೊಂಬೆಗಳ ಸಾಲಿನಲ್ಲಿ ರಾಜರಾಣಿ ಬೊಂಬೆ ಮೇಲ್ಪಂಕ್ತಿಯಲ್ಲಿ ಸ್ಥಾನಪಡೆದಿರುತ್ತವೆ. ಈ ಬೊಂಬೆಗಳನ್ನು ಪಟ್ಟದ ಬೊಂಬೆಗಳೆಂದು ಕರೆಯಲಾಗುತ್ತದೆ. ಉಳಿದಂತೆ ಅಂಬಾರಿ ಹೊತ್ತ ಆನೆ, ಪದಾತಿದಳ, ಕುದುರೆ, ಒಂಟೆಗಳ ಸಾಲು, ಮೈಸೂರು ಅರಮನೆ ಸೇರಿದಂತೆ ಹಲವು ಬೊಂಬೆಗಳನ್ನು ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವುದು ಕಂಡು ಬರುತ್ತದೆ. ಅದು ಏನೇ ಇರಲಿ ಬೊಂಬೆಗಳು ಕೂಡ ಮೈಸೂರು ದಸರಾಕ್ಕೆ ಸಾಥ್ ನೀಡುವುದಂತು ನಿಜ.


Spread the love