ಮೈಸೂರು ದಸರಾ: ಅಭಿಮನ್ಯುಗೆ ಮರದ ಅಂಬಾರಿ ತಾಲೀಮು

Spread the love

ಮೈಸೂರು ದಸರಾ: ಅಭಿಮನ್ಯುಗೆ ಮರದ ಅಂಬಾರಿ ತಾಲೀಮು

ಮೈಸೂರು: ದಸರಾ ಗಜಪಡೆಗೆ ಭಾರ ಹೊರುವ ತಾಲೀಮು ಭಾನುವಾರ ಮುಕ್ತಾಯಗೊಂಡಿದ್ದು, ಸೋಮವಾರದಿಂದ ಕ್ಯಾಪ್ಟನ್ ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು ಆರಂಭಿಸಲಾಗುತ್ತಿದೆ

ಈಗಾಗಲೇ ಮೊದಲ ತಂಡದಲ್ಲಿ ಆಗಮಿಸಿರುವ ಗಂಡಾನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಧನಂಜಯ, ಭೀಮ ಹಾಗೂ ಮಹೇಂದ್ರ ಆನೆಗಳಿಗೂ ಮರದ ಅಂಬಾರಿ ಹೊರಿಸುವ ತಾಲೀಮು ನಡೆಸಲಾಗುತ್ತದೆ. ಸೆ.7ರಂದು ಗಜಪಡೆಯ 2ನೇ ತಂಡ ಬರಲಿದೆ. ಎರಡನೇ ಹಂತದಲ್ಲಿ ದುಬಾರೆ ಕ್ಯಾಂಪ್‌ನಿಂದ ಗೋಪಿ (41), ಶ್ರೀರಾಮ (40) ವಿಜಯ (63) ಮತ್ತು ರಾಂಪುರ ಕ್ಯಾಂಪ್‌ನಿಂದ ಪಾರ್ಥಸಾರಥಿ(18), ಕುಂತಿ (36)ಯನ್ನು ಕರೆತರಲಾಗುತ್ತಿದೆ.

ಸೆ.8ರಂದು ಮೊದಲ ತಂಡದ ಆನೆಗಳೂ ಸೇರಿದಂತೆ ಎಲ್ಲ 14 ಆನೆಗಳಿಗೂ ದೇಹತೂಕ ಮಾಡಿಸಲಾಗುತ್ತದೆ. ಮೊದಲ ತಂಡದ ಆನೆಗಳು ಅರಮನೆಗೆ ಬಂದು 28 ದಿನ ಪೂರ್ಣಗೊಂಡಿದೆ. ಪೌಷ್ಟಿಕ ಆಹಾರ ನೀಡಿರುವುದರಿಂದ ಈಗಾಗಲೇ ಒಂದೊಂದು ಆನೆಯೂ 200 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿವೆ. ಸೆ.8ರಿಂದ ತಾಲೀಮಿನಲ್ಲಿ ಎಲ್ಲ 14 ಆನೆಗಳು ಪಾಲ್ಗೊಳ್ಳಲಿವೆ. ಜಂಬೂಸವಾರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಈ ನಡುವೆ ಮದದ ಕಾರಣಕ್ಕೆ ಪಟ್ಟದ ಆನೆ ವಿಕ್ರಮನನ್ನು ಕೈಬಿಡಲಾಗಿದೆ. ಇದರಿಂದ 36 ವರ್ಷದ ಕುಂತಿ ಹೆಣ್ಣಾನೆಗೆ ದಸರಾ ಗಜಪಡೆ ಸೇರಿಕೊಳ್ಳುವ ಅದೃಷ್ಟ ಖುಲಾಯಿಸಿದೆ. ದಸರಾ ಮಹೋತ್ಸವದಲ್ಲಿ ಅನೇಕ ವರ್ಷಗಳಿಂದ ಪಟ್ಟದ ಆನೆಯ ಪಟ್ಟ ಕಟ್ಟಿಕೊಂಡು ಅರಮನೆಯಲ್ಲಿ ರಾಜಮನೆತನದವರಿಂದ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುತ್ತಿದ್ದ ವಿಕ್ರಮ ಸತತ 2ನೇ ಬಾರಿಯೂ ದಸರಾದಿಂದ ದೂರ ಉಳಿದಿದ್ದಾನೆ.

ಸ್ವಭಾವ, ದಂತ, ಸೊಂಡಿಲು ಹಾಗೂ ಮುಖದ ಲಕ್ಷಣದಿಂದಾಗಿ ರಾಜಮನೆತನದವರ ಒಪ್ಪಿಗೆ ಮೇರೆಗೆ ವಿಕ್ರಮ ಆನೆ ಕಳೆದ ಹಲವು ವರ್ಷಗಳಿಂದ ಪಟ್ಟದ ಆನೆಯಾಗಿ ಕರ್ತವ್ಯ ನಿರ್ವಹಿಸಿದೆ. ದುಬಾರೆ ಆನೆ ಕ್ಯಾಂಪ್‌ನಲ್ಲಿ 59 ವರ್ಷದ ವಿಕ್ರಮ ರಾಜಮನೆತನದವರು ಮಾತ್ರವಲ್ಲದೆ, ಅರಣ್ಯ ಇಲಾಖೆಯ ಸಿಬ್ಬಂದಿ ಮನಸ್ಸನ್ನು ಗೆದ್ದಿದೆ. ಇತರ ಆನೆಗಳಿಗೆ 2-3 ತಿಂಗಳಲ್ಲೇ ಮದ ಇಳಿದರೂ ವಿಕ್ರಮನಿಗೆ ಮಾತ್ರ ದೀರ್ಘಕಾಲದವರೆಗೆ ಮದದ ಅಂಶ ಕಂಡು ಬಂದಿದೆ.

ಹಾಗಾಗಿ, ಹೆಚ್ಚುವರಿ ಆಗಿ ಗುರುತಿಸಿದ್ದ ಬಂಡೀಪುರದ ರಾಂಪುರನ ಕುಂತಿ(36) ಹೆಣ್ಣಾನೆಯನ್ನು ಕರೆತರಲಾಗುತ್ತಿದೆ. ಸೆ.7ರಂದು 2ನೇ ತಂಡದಲ್ಲಿ 4 ಆನೆ ಆಗಮಿಸಲಿದ್ದು, ಅದರಲ್ಲಿ ಕುಂತಿ ಆನೆಯೂ ಬರಲಿದೆ. ಮಹೇಂದ್ರ, ಪಾರ್ಥಸಾರಥಿ ಹಾಗೂ ಕುಂತಿಗೆ ಇದು ಮೊದಲ ದಸರಾ ಆಗಲಿದೆ.

ಇನ್ನು ಗಜಪಡೆಯ ಕುರಿತಂತೆ ಮಾಹಿತಿ ನೀಡಿರುವ ಡಿಸಿಎಫ್ ಕರಿಕಾಳನ್ ಅವರು, ಅರಮನೆಯಲ್ಲಿ ಬೀಡುಬಿಟ್ಟಿರುವ 9 ಆನೆಗಳು ಆರೋಗ್ಯವಾಗಿದ್ದು, ತಾಲೀಮಿಗೆ ನಿರೀಕ್ಷೆಗೂ ಮೀರಿ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿವೆ. ಮೊದಲ ತಂಡದಲ್ಲಿ ಬಂದ 9 ಆನೆಗಳಲ್ಲಿ 6 ಆನೆಗಳಲ್ಲಿ ಅರ್ಜುನ ಹೊರತುಪಡಿಸಿ, ಉಳಿದ 5 ಗಂಡಾನೆಗಳಿಗೂ ಭಾರ ಹೊರೆಸುವ ತರಬೇತಿ ನೀಡಲಾಗಿದೆ. ಅದರಲ್ಲೂ ಹೊಸ ಆನೆಗಳಾದ ಮಹೇಂದ್ರ, ಭೀಮಾ ಆನೆಗೂ ಭಾರ ಹೊರೆಸುವ ತಾಲೀಮು ನಡೆಸಲಾಗಿದೆ. ಇಂದಿನಿಂದ ದಸರಾ ಗಜಪಡೆಗೆ ಮರದ ಅಂಬಾರಿ ತಾಲೀಮು ಆರಂಭವಾಗಲಿದೆ. ಸೆ. ೫ರಂದು ಸಂಜೆ ೪ ಗಂಟೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಕ್ರೇನ್ ಮೂಲಕ ಮರದ ಅಂಬಾರಿ ಕಟ್ಟಲಾಗುತ್ತದೆ. ಸಂಜೆ ೫ ಗಂಟೆಗೆ ಆನೆಗಳು ಬನ್ನಿಮಂಟಪ ತಲುಪಲಿವೆ ಎಂದು ತಿಳಿಸಿದರು.


Spread the love