ಮೈಸೂರು ದಸರಾ… ಈ ಬಾರಿಯೂ ಸರಳ?

Spread the love

ಮೈಸೂರು ದಸರಾ… ಈ ಬಾರಿಯೂ ಸರಳ?

ಮೈಸೂರು: ಎಲ್ಲವೂ ಸರಿ ಇದ್ದಿದ್ದರೆ ಇಷ್ಟರಲ್ಲೇ ಮೈಸೂರಿನಲ್ಲಿ ದಸರಾ ಸಂಭ್ರಮ ಶುರುವಾಗಿರುತ್ತಿತ್ತು. ಆದರೆ ಕೊರೊನಾ ಕಾರಣದಿಂದ ದಸರಾ ಆಚರಣೆ ಹೇಗೆ ನಡೆಸಬೇಕು ಎಂಬುದೇ ಸರ್ಕಾರಕ್ಕೆ ಸವಾಲ್ ಆಗಿದೆ. ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಬಹುಶಃ ಈ ಬಾರಿಯೂ ಕಳೆದ ವರ್ಷದಂತೆ ಸರಳವಾಗಿ ನಡೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಇದೀಗ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಆಚರಣೆ ಕುರಿತಂತೆ ಸೆ.3ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ಕರೆದಿದ್ದು ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಮೇಲೆ ಈ ಬಾರಿಯ ದಸರಾ ಆಚರಣೆ ನಿಂತಿದೆ.

ಸೆ.3ರಂದು ಸಂಜೆ 4 ಗಂಟೆಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸರಳವಾಗಿ ಆಚರಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಸಭೆಯಲ್ಲಿ ಮೈಸೂರು ಭಾಗದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸೇರಿದಂತೆ ಸಚಿವರು, ಅಧಿಕಾರಿಗಳು ಭಾಗವಹಿಸಿ ನಾಡಹಬ್ಬವನ್ನು ಹೇಗೆ ಆಚರಿಸಬೇಕೆಂಬುದನ್ನು ಚರ್ಚಿಸಲಿದ್ದಾರೆ.

ಕಳೆದ ವರ್ಷ ಕೊರೊನಾ ಸ್ಪೋಟ ತಡೆಯುವ ಹಿನ್ನೆಲೆಯಲ್ಲಿ ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತ ಮಾಡಲಾಗಿತ್ತು. ಈ ಬಾರಿಯೂ ಅಕ್ಟೋಬರ್ ವೇಳೆಗೆ ಕೊರೊನಾ ೩ನೇ ಅಲೆ ಸ್ಪೋಟವಾಗುತ್ತದೆ ಎಂದು ತಜ್ಞರು ವರದಿ ನೀಡಿರುವುದರಿಂದ ದೇಶ ವಿದೇಶದ ಲಕ್ಷಾಂತರ ಮಂದಿ ವೀಕ್ಷಿಸುವ ನಾಡಹಬ್ಬವನ್ನು ಅರಮನೆಗೆ ಸೀಮಿತಗೊಳಿಸಿದರೂ ಅಚ್ಚರಿ ಪಡಬೇಕಾಗಿಲ್ಲ.

ಅ.೬ರಿಂದ ನವರಾತ್ರಿ ಆರಂಭವಾಗಲಿದೆ. ಅ.೧೫ರಂದು ಜಂಬೂ ಸವಾರಿಯೊಂದಿಗೆ ದಸರಾಕ್ಕೆ ತೆರೆಬೀಳಲಿದೆ. ಈ ಅವಧಿಯಲ್ಲಿ ಮೈಸೂರಿಗೆ ದೇಶ ವಿದೇಶದ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರ ನೋಡಲು ಸಾವಿರಾರು ಮಂದಿ ಆಗಮಿಸುತ್ತಾರೆ. ಇದರಿಂದಾಗಿ ಕೊರೊನಾ ಸ್ಪೋಟವಾಗುವ ಸಾಧ್ಯತೆ ಇರುತ್ತದೆ. ಇದೆಲ್ಲವನ್ನು ಮನಗಂಡು ತೀರ್ಮಾನಕೈಗೊಳ್ಳುವುದು ಖಚಿತವಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ವಿದ್ಯುತ್ ದೀಪಾಲಂಕಾರವಿರಲಿದ್ದು, ಜಂಬೂ ಸವಾರಿಯನ್ನು ಅರಮನೆ ಆವರಣಕ್ಕೆ ಸೀಮಿತವಾಗಿಸುವ ಸಾಧ್ಯತೆ ಇದೆ.

ಕೆಲವೊಮ್ಮೆ ಅತಿವೃಷ್ಠಿಯಾದ ಸಂದರ್ಭ ದಸರಾವನ್ನು ಸರಳವಾಗಿ ಆಚರಿಸಿದ್ದು ಬಿಟ್ಟರೆ ಉಳಿದಂತೆ ಅದ್ಧೂರಿತನಕ್ಕೆ ಆದ್ಯತೆ ನೀಡಲಾಗುತ್ತಿತ್ತು. ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಿಂದ ಹೇಳುವುದಾದರೆ ದಸರಾ ದಿಂದಲೇ ಒಂದಷ್ಟು ಜನರ ಆರ್ಥಿಕ ಜೀವನವೂ ಸುಗಮವಾಗುತ್ತಿತ್ತು. ಪ್ರವಾಸೋದ್ಯಮ ಬೆಳೆಯುವುದರೊಂದಿಗೆ ಅದರೊಂದಿಗೆ ಬೆಸೆದುಕೊಂಡ ಹಲವು ಕ್ಷೇತ್ರಗಳು ಪ್ರಗತಿ ಕಾಣುತ್ತಿದ್ದವು ಆದರೆ ಈ ಬಾರಿ ಸರಳವಾಗಿ ಆಚರಣೆ ಮಾಡುವುದು ಬಹುತೇಕ ದೃಢವಾಗಿದೆ. ಕೊರೊನಾದ ಆರ್ಭಟ ಹಾಗೆಯೇ ಇದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸೆ.3ರಂದು ನಡೆಯುವ ಸಭೆಯ ಬಳಿಕವೇ ಎಲ್ಲವೂ ಗೊತ್ತಾಗಬೇಕಿದೆ.


Spread the love