
ಮೈಸೂರು: ಪ್ರಿಯಕರನ ಜತೆ ಸೇರಿ ಪತಿಯ ಕೊಲೆ ಮಾಡಿದ ಪತ್ನಿ: 9 ತಿಂಗಳ ನಂತರ ಬಂಧನ
ಮೈಸೂರು: ಪತಿ ಎಚ್.ಟಿ.ವೆಂಕಟರಾಜು ಅವರ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ ಪತ್ನಿ ಉಮಾ (30) ಎಂಬ ಆರೋಪಿ ಹಾಗೂ ಈಕೆಯ ಪ್ರಿಯಕರ ಅವಿನಾಶ್ (26)ನನ್ನು ಬನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆರಂಭದಲ್ಲಿ ಇದೊಂದು ಸಹಜ ಸಾವು ಎಂದು ಪತ್ನಿ ಹೇಳಿದ್ದರು. ಆದರೆ, ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಮರಣೋತ್ತರ ಪರೀಕ್ಷೆಯ ವರದಿಗಳಿಂದ ಇದು ಕೊಲೆ ಎಂಬ ಅಂಶ ತಿಳಿಯಿತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತನಗಿಂತ 20 ವರ್ಷ ದೊಡ್ಡವರಾಗಿದ್ದ ಮಂಡ್ಯದ ಹೊನಗಾನಹಳ್ಳಿಯ ಎಚ್.ಟಿ.ವೆಂಕಟರಾಜು (50) ಅವರನ್ನು 10 ವರ್ಷಗಳ ಹಿಂದೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಳ್ಳೇಕೆರೆ ಗ್ರಾಮದ ಉಮಾ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದರು. 2ನೇ ಮಗುವಿನ ಬಾಣಂತನಕ್ಕಾಗಿ ತಿ.ನರಸೀಪುರ ತಾಲ್ಲೂಕಿನ ಹುಣಸಗಳ್ಳಿ ಗ್ರಾಮದ ತನ್ನ ಅಜ್ಜಿ ಮನೆಗೆ ಹೋಗಿದ್ದಾಗ, ಮನೆಯ ಪಕ್ಕದಲ್ಲೇ ಇದ್ದ ಅವಿನಾಶ್ ಎಂಬ ಯುವಕ ಪರಿಚಯವಾಗಿದ್ದಾನೆ. ನಂತರ, ಇಬ್ಬರ ಮಧ್ಯೆ ಅನೈತಿಕ ಸಂಬಂಧ ಬೆಳೆದಿದೆ.
ಕಳೆದ ವರ್ಷ ಅಕ್ಟೋಬರ್ 10ರಂದು ಪತಿಯನ್ನು ತನ್ನ ಅಜ್ಜಿ ಮನೆಗೆ ಕರೆಸಿಕೊಂಡ ಉಮಾ ನಿದ್ದೆ ಮಾತ್ರೆ ಹಾಕಿ ಕಾಫಿ ಕೊಟ್ಟು ಪತಿಯ ವೃಷಣವನ್ನು ಅದುಮಿ, ಮುಖಕ್ಕೆ ದಿಂಬು ಇಟ್ಟು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ, ತಲೆಸುತ್ತು ಬಂದು ಪತಿ ಮೃತಪಟ್ಟರು ಎಂದು ಸಂಬಂಧಿಕರಿಗೆ ತಿಳಿಸಿದ್ದಾರೆ.
ಮೃತ ವೆಂಕಟರಾಜು ಅವರ ಸೋದರ ಎಚ್.ಟಿ.ರವೀಂದ್ರ ಅವರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದರು. ಮರಣೋತ್ತರ ಮತ್ತು ವಿಧಿವಿಜ್ಞಾನ ಪರೀಕ್ಷೆಗಳ ವರದಿಗಳಿಂದ ಕೊಲೆ ಎಂಬುದು ಗೊತ್ತಾಯಿತು. ಸದ್ಯ, ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ ಎಂದು ಚೇತನ್ ತಿಳಿಸಿದರು.
ಬನ್ನೂರು ಠಾಣೆ ಇನ್ಸ್ಪೆಕ್ಟರ್ ಬಿ.ಚಿಕ್ಕರಾಜಶೆಟ್ಟಿ, ಪಿಎಸ್ಐ ಕುಸುಮಾ, ಸಿಬ್ಬಂದಿಯಾದ ನಾಗರತ್ನ, ಶಾಲಿನಿ, ಮಂಜುನಾಥ, ಮಂಜು ಕಾರ್ಯಾಚರಣೆ ತಂಡದಲ್ಲಿದ್ದರು.