
ಮೈಸೂರು: ಬಿಜೆಪಿಯಿಂದ ಮಹಾಪ್ರಚಾರ ಅಭಿಯಾನ
ಮೈಸೂರು: ರಾಜ್ಯದಲ್ಲಿ ಸ್ಪಷ್ಟ ಬಹುಮತ ಸದೃಢ ಸರ್ಕಾರದ ಆಶಯದಲ್ಲಿ ಬಿಜೆಪಿಯಿಂದ ಎರಡು (ಏ.25, 26)ದಿನಗಳ ಕಾಲ ಮಹಾಪ್ರಚಾರ ಅಭಿಯಾನ ಹಮ್ಮಿಕೊಂಡಿದ್ದು, ರಾಜ್ಯದ 224 ಕ್ಷೇತ್ರದಲ್ಲಿಯೂ ಈ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಮಹಾ ಪ್ರಚಾರ ಅಭಿಯಾನದಲ್ಲಿ ಕೇಂದ್ರದ 98 ಸಚಿವರು, 13ರಾಷ್ಟ್ರೀಯ ನಾಯಕರು, 14 ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಗುರಿಯೊಂದಿಗೆ ಪ್ರಚಾರ ಅಭಿಯಾನ ಹಮ್ಮಿಕೊಂಡಿದ್ದೇವೆ. ಜೆ.ಪಿ.ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್, ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್, ನಿರ್ಮಲಾ ಸೀತಾರಾಮನ್, ಅಣ್ಣಾ ಮಲೈ, ಯೋಗಿ ಆದಿತ್ಯನಾಥ್, ದೇವೇಂದ್ರ ಪಡ್ನವೀಸ್, ಸ್ಮೃತಿ ಇರಾನಿ, ರಾಜ್ಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ನಳಿನ್‌ಕುಮಾರ್ ಕಟೀಲ್, ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ ಪಾಲ್ಗೊಳ್ಳುವುದಾಗಿ ಹೇಳಿದರು.
ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬೋಜೇಗೌಡರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದಾರೆ. ಇದು ಚುನಾವಣಾ ಪೂರ್ವ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ ಹೇಳಬೇಕು. ಬಹಿರಂಗವಾಗಿ ಮತಯಾಚಿಸುತ್ತಿದ್ದಾರೆ. ಇದು ಹೊಂದಾಣಿಕೆಯಾದರೆ ವರಿಷ್ಠರು ಕ್ರಮ ಕೈಗೊಳ್ಳುವುದಿಲ್ಲ. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಬಹಳ ಮಂದಿ ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಆದರೆ ಜನ ನನ್ನ ಪರವಾಗಿದ್ದಾರೆ ಎಂದರು.