
ಮೈಸೂರು ಬೆಂಗಳೂರು ದಶಪಥದಲ್ಲಿ ಟೋಲ್ ಆರಂಭ :ಪ್ರತಿಭಟನೆ
ರಾಮನಗರ: ಕಾಂಗ್ರೆಸ್ ಹಾಗೂ ಕನ್ನಡ ಸಂಘಟನೆಗಳ ಕಾರ್ಯಕರ್ತರು, ವಕೀಲರು ಸೇರಿದಂತೆ ಸಾರ್ವಜನಿಕರ ವಿರೋಧದ ನಡುವೆ ಪೊಲೀಸ್ ಸರ್ಪಗಾವಲಿನಲ್ಲಿ ಮಂಗಳವಾರ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಟೋಲ್ ಶುಲ್ಕ ಸಂಗ್ರಹ ಕಾರ್ಯ ಆರಂಭವಾದ ಬೆನ್ನಲ್ಲೇ ತಾಲ್ಲೂಕಿನ ಹೆಜ್ಜಾಲ ಸಮೀಪದ ಕಣಿಮಿಣಿಕೆ ಟೋಲ್ ಪ್ಲಾಜಾದಲ್ಲಿ ಬೆಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಹಾಗೂ ಶೇಷಗಿರಿಹಳ್ಳಿ ಬಳಿಯ ಪ್ಲಾಜಾದಲ್ಲಿ ಮೈಸೂರು ಕಡೆಯಿಂದ ಬರುವ ವಾಹನಗಳಿಗೆ ಬೆಳಿಗ್ಗೆ 8ಗಂಟೆ ಸಮಯಕ್ಕೆ ಟೋಲ್ ಶುಲ್ಕ ಸಂಗ್ರಹ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಈ ಟೋಲ್ ಪ್ಲಾಜಾಗಳ ಬಳಿ ಹೆಚ್ಚಿನ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು. ಕಾಂಗ್ರೆಸ್ ಹಾಗೂ ನಾನಾ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಎರಡೂ ಟೋಲ್ ಪ್ಲಾಜಾ ಎದುರು ಪ್ರತಿಭಟನೆಗಿಳಿದರು.
ಹೆದ್ದಾರಿ ಪ್ರಾಧಿಕಾರವು ದಶಪಥ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಟೋಲ್ ಶುಲ್ಕ ಸಂಗ್ರಹಿಸಲು ಆರಂಭಿಸಿದೆ. ಹಲವು ಕಡೆ ಸರ್ವೀಸ್ ರಸ್ತೆ ಕಾಮಗಾರಿಯೂ ಆಗಿಲ್ಲ, ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಹೀಗೆ ಅಪೂರ್ಣ ಕಾಮಗಾರಿ ನಡುವೆಯೇ ಹೆದ್ದಾರಿ ಶುಲ್ಕ ಸಂಗ್ರಹ ಸರಿಯಲ್ಲ. ಅಲ್ಲದೆ ಬೆಂಗಳೂರಿನಿಂದ ನಿಡಘಟ್ಟದ ವರೆಗಿನ 56 ಕಿ.ಮೀಗೆ ಟೋಲ್ ಪಾವತಿ ಮಾಡಿ ಸವಾರರು ಸಂಚಾರ ಮಾಡಬೇಕಿದೆ.
ಈ ವೇಳೆ ಕಣಮಿಣಿಕಿ ಟೋಲ್ ಪ್ಲಾಜಾ ಬಳಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರಕಾರ ಮತ್ತು ಪ್ರಾಧಿಕಾರದ ಅಧಿಕಾರಿಗಳು ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಟೋಲ್ ದ್ವಂಸ ಮಾಡಲು ಮುಂದಾದಾಗ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ತಡೆದು ಎಲ್ಲರನ್ನೂ ಬಂಧಿಸಿದರು. ನಂತರ ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಬಳಿ ಪ್ರತಿಭಟನಾ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದು ಒಟ್ಟು ಮೂರು ಕೆಎಸ್‌ಆರ್‌ಟಿ ಬಸ್‌ಗಳಲ್ಲಿ ಕರೆದೋಯ್ದರು.
ಈ ಹಿಂದೆ ಮಾರ್ಚ್ 1ರಿಂದ ಟೋಲ್ ಶುಲ್ಕ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರೆಡಿಸಿತ್ತು. ಸರ್ವಿಸ್ ರಸ್ತೆ ಸೇರಿದಂತೆ ಮತ್ತಿತರ ಕಾಮಗಾರಿಗಳು ಬಾಕಿಯಿದ್ದ ಕಾರಣ ಟೋಲ್ ಸಂಗ್ರಹಕ್ಕೆ ಕನ್ನಡಪರ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಬಳಿಕ 14 ದಿನಗಳ ಕಾಲಾವಕಾಶ ನೀಡಿದ್ದ ಪ್ರಾಧಿಕಾರ ಈಗ ಮತ್ತೆ ಟೋಲ್ ವಸೂಲಿಗೆ ಆದೇಶಿಸಿ ಪ್ರಕ್ರಿಯೆ ಆರಂಭಿಸಿದೆ.