ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈ ಕೋರ್ಟ್ ಗ್ರೀನ್ ಸಿಗ್ನಲ್
ಮೂಡುಬಿದಿರೆ: ಕಂಬಳ ಆಯೋಜನೆಗೆ ಪೇಟಾದವರು ತಕರಾರು ಮಾಡಿದ ಹಿನ್ನೆಲೆಯಲ್ಲಿ ನಿಂತು ಹೋಗಿದ್ದ ಮೈಸೂರು, ಬೆಂಗಳೂರು ಹಾಗೂ ಶಿವಮೊಗ್ಗ ಕಂಬಳ ನಡೆಸಲು ಹೈ ಕೋಟ್೯ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಸರಕಾರ ಅಧೀನದ ರಾಜ್ಯ ಕಂಬಳ ಅಸೋಸಿಯೇಷನ್ ಗೆ ಮೊದಲ ಜಯ ಸಿಕ್ಕಂತಾಗಿದೆ.
ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಬೆಳಪು ಡಾ. ದೇವಿ ಪ್ರಸಾದ್ ಶೆಟ್ಟಿ, ಇದು ನಮ್ಮ ಹೋರಾಟಕ್ಕೆ ಸಂದ ಜಯ. ಕಂಬಳ ಕ್ಷೇತ್ರದಲ್ಲಿ ಸಂತಸದ ಕ್ಷಣ. ಕೋಣಗಳ ಸಾಗಾಟದ ವೇಳೆ ಕೋಣಗಳಿಗೆ ಹಿಂಸೆಯಾಗುತ್ತದೆ ಎಂದು ಪೇಟಾ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಕರ್ನಾಟಕ ಸರಕಾರದ ಅಡ್ವಕೇಟ್ ಜನರಲ್ ಶಶಿಕಕಿರಣ್ ಶೆಟ್ಟಿ, ವಿನೋದ್ ಕುಮಾರ್ ಮದೂರು, ಧನಂಜಯ್ ಕುಮಾರ್ ದೊಡ್ಡಗುತ್ತು ಕಂಬಳದ ಪರ ವಾದ ಮಂಡಿಸಿದ್ದರು.
ಜಿಲ್ಲೆಯ ಕಂಬಳವು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ಸರಕಾರ ಕೂಡ ಇದಕ್ಕೆ ಮಾನ್ಯತೆ ನೀಡಿದೆ ಎಂದು ಕೋರ್ಟ್ ನಮ್ಮ ಬೇಡಿಕೆಯನ್ನು ಪುರಸ್ಕರಿಸಿದೆ. ಆಯಾ ಕಂಬಳಗಳ ಸಮಿತಿಯವರ ಹೋರಾಟ ಫಲ ನೀಡಿದೆ. ಆದರೆ, ಪಿಲಿಕುಳ ಕಂಬಳ ನಡೆಸುವ ಕುರಿತು ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.
ಕಂಬಳ ಅಸೋಸಿಯೇಷನ್ ಕೋಶಾಧಿಕಾರಿ ಮುಚ್ಚೂರು ಲೋಕೇಶ್ ಶೆಟ್ಟಿ ಮಾಹಿತಿ ನೀಡಿ, ಇದೊಂದು ಐತಿಹಾಸಿಕ ದಿನ. ಕಂಬಳ ಅಸೋಶಿಯೇಶನ್ ಗೆ ಸಂದ ಜಯ ಎಂದು ಬಣ್ಣಿಸಿದ್ದು, ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.