ಮೈಸೂರು ರೈಲು ನಿಲ್ದಾಣದ ವಿಸ್ತರಣೆ ಕಾರ್ಯ

Spread the love

ಮೈಸೂರು ರೈಲು ನಿಲ್ದಾಣದ ವಿಸ್ತರಣೆ ಕಾರ್ಯ

ಮೈಸೂರು: ಮೈಸೂರು ನಿಲ್ದಾಣವನ್ನು ದೂರದೃಷ್ಟಿಯಿದ್ದು, 493 ಕೋಟಿ ವೆಚ್ಚದಲ್ಲಿ ಮೈಸೂರು ನಿಲ್ದಾಣ ಹಾಗೂ ನಾಗನಹಳ್ಳಿ ಟರ್ಮಿನಲ್ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು, ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಸಂಸದ ಪ್ರತಾಪಸಿಂಹ ತಿಳಿಸಿದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ನಗರದ ಮುಖ್ಯ ರೈಲು ನಿಲ್ದಾಣ ಸೇರಿದಂತೆ ಅಶೋಕಪುರಂ, ನಾಗನಹಳ್ಳಿ, ಬೆಳಗೊಳ, ಕಡಕೊಳ ನಿಲ್ದಾಣಗಳನ್ನು ವಿಸ್ತರಿಸಿ ಉನ್ನತೀಕರಿಸಲಾಗುತ್ತಿದ್ದು, ರೈಲುಗಳನ್ನು ಚಾಮರಾಜನಗರಕ್ಕೆ ವಿಸ್ತರಿಸುವ ದೂರದೃಷ್ಟಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಮೈಸೂರು ಬೆಂಗಳೂರು ದಶಪಥ ಹಾಗೂ ನಾಗನಹಳ್ಳಿ ರೈಲ್ವೆ ಸ್ಯಾಟಲೈಟ್ ಟರ್ಮಿನಲ್ ನಿರ್ಮಾಣದ ಭರವಸೆ ನೀಡಿದ್ದರು. ಕೋವಿಡ್ ಕಾರಣ ಎಲ್ಲ ಕೆಲಸಗಳು ನನೆಗುದಿಗೆ ಬಿದ್ದಿದ್ದವು. ರೈಲು ಹಾಗೂ ವಿಮಾನ ನಿಲ್ದಾಣ ವಿಸ್ತರಣೆಗೆ ರಾಜ್ಯ ಸರ್ಕಾರಕ್ಕೆ ಅನುದಾನ ಕೋರಲಾಗಿತ್ತು. ಹಣಕಾಸಿನ ಕೊರತೆಯಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಮಾನ ನಿಲ್ದಾಣ ವಿಸ್ತರಣೆಗೆ ಮಾತ್ರ 319 ಕೋಟಿ ನೀಡಿದ್ದರು ಎಂದು ಮಾಹಿತಿ ನೀಡಿದರು.

ನಾಗನಹಳ್ಳಿ ಸ್ಯಾಟಲೈಟ್ ರೈಲ್ವೆ ಟರ್ಮಿನಲ್ ಯೋಜನೆಗೆ ಅನುದಾನಕ್ಕಾಗಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಭೂಸ್ವಾಧೀನಕ್ಕೆ ಹೆಚ್ಚು ಹಣ ಬೇಕಾದ್ದರಿಂದ ರೈಲ್ವೆ ಸಿಬ್ಬಂದಿ ವಸತಿ ಗೃಹಗಳನ್ನು ತೆರವುಗೊಳಿಸಿ ಮೈಸೂರಿನಲ್ಲಿ 3 ರನ್ನಿಂಗ್, 4 ಸ್ಟಾಬಲ್, 4 ಪಿಟ್ ಲೇನ್ ಹಾಗೂ 1 ಶಂಟಿಂಗ್ ನೆಕ್ ಸ್ಥಾಪಿಸಲಾಗುತ್ತಿದೆ. ನಾಗನಹಳ್ಳಿಯಲ್ಲೂ ತಲಾ ಒಂದು ರನ್ನಿಂಗ್, ಪಿಟ್, ಸ್ಟಾಬಲ್ ಲೇನ್ ನಿರ್ಮಾಣಗೊಳ್ಳಲಿದೆ. ಒಂದು ಮೆಮು ಷೆಡ್ ನಿರ್ಮಾಣಕ್ಕೆ 7 ಎಕರೆ ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪ್ರತಾಪ ಸಿಂಹ ವಿವರಿಸಿದರು.

ವಸತಿ ಗೃಹಗಳಲ್ಲಿ ವಾಸವಿರುವವರನ್ನು ಸಿಎಫ್‌ಟಿಆರ್‌ಐ, ಡಿಎಫ್‌ಆರ್‌ಎಲ್ ಸೇರಿದಂತೆ ವಿವಿಧ ಸಂಸ್ಥೆಗಳ ವಸತಿ ಗೃಹಗಳಿಗೆ ಸ್ಥಳಾಂತರಿಸಿ ಆಯಾ ಸಂಸ್ಥೆಗಳಿಗೆ ಬಾಡಿಗೆಯನ್ನೂ ನೀಡಲಾಗುತ್ತದೆ. ಖಾಸಗಿ ಅಪಾರ್ಟ್‌ಮೆಂಟ್‌ಗಳನ್ನು ಬಾಡಿಗೆ ಪಡೆಯಲಾಗುತ್ತಿದೆ. ಇದೆಲ್ಲದರ ಡಿಪಿಆರ್ ಆಗಸ್ಟ್‌ನಲ್ಲಿಯೇ ರೂಪುಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಜ.15ರಂದು ನಡೆಯಲಿದೆ ಎಂದರು.

ಅಶೋಕಪುರಂ ನಿಲ್ದಾಣ ನವೀಕರಣಕ್ಕೆ ಮೊದಲ ಹಂತದಲ್ಲಿ 15.17 ಕೋಟಿ, ಎರಡನೇ ಹಂತದಲ್ಲಿ 13.39 ಕೋಟಿ ಬಿಡುಗಡೆಯಾಗಲಿದೆ. ಜೂನ್ 2023ರಲ್ಲಿ ಕಾಮಗಾರಿ ಮುಗಿಯಲಿದ್ದು, ಮೂರು ಪ್ಲಾಟ್‌ಫಾರ್ಮ್ ನಿರ್ಮಾಣಗೊಳ್ಳಲಿದೆ. ಅದಕ್ಕಾಗಿ 5,310 ಚ.ಮೀ ಸರ್ಕಾರಿ ಭೂಮಿ ಹಾಗೂ 344 ಚ.ಮೀ ಖಾಸಗಿ ಭೂಮಿ ಬೇಕಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಸ್ಥಳ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.

ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾದ ಇ.ವಿಜಯಾ ಇದ್ದರು.


Spread the love

Leave a Reply

Please enter your comment!
Please enter your name here