
ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಶೀಘ್ರ ಚಾಲನೆ
ಮೈಸೂರು: ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ರನ್ ವೇ ವಿಸ್ತರಣೆ ಸಂಬಂಧ ಈಗಾಗಲೇ 160 ಎಕರೆ ಭೂ ಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣ ಮತ್ತು ರನ್ ವೇ ವಿಸ್ತರಣೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರನ್ ವೇ ವಿಸ್ತರಣೆಗೆ ಒಟ್ಟು 209 ಎಕರೆ ಭೂ ಸ್ವಾಧೀನ ಆಗಬೇಕಿದ್ದು, ಸದ್ಯಕ್ಕೆ 160 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಉಳಿದ 47 ಎಕರೆ ನೋಟಿಫಿಕೇಷನ್ ಆಗಿದೆ. ವಾರದೊಳಗೆ ಏರ್ ಪೋರ್ಟ್ ಅಥಾರಿಟಿಗೆ 160ಎಕರೆ ಭೂಮಿ ಹಸ್ತಾಂತರವಾಗಲಿದೆ ಎಂದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಸದ್ಯಕ್ಕೆ 1.7 ಕಿ.ಮೀ. ರನ್ ವೇ ಇದ್ದು, ಇದನ್ನು 2.7 ಕಿ.ಮೀಗೆ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಆದರೆ, ಭವಿಷ್ಯದ ದೃಷ್ಟಿಯಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ 3.5 ಕಿ.ಮೀ. ರನ್ ವೇ ಅಗತ್ಯವಿದೆ. ಈ ಹಿನ್ನೆಲೆ 3.5ಕಿ.ಮೀ, ವಿಸ್ತರಣೆ ಆದರೆ ಅನುಕೂಲವಾಗಲಿದೆ. ಈಗಾಗಲೇ ಶಿವಮೊಗ್ಗ ಏರ್‌ಪೋರ್ಟ್ ಕೂಡ 3.5 ಕಿ.ಮೀ ರನ್‌ವೇ ಹೊಂದಿದೆ. ಹಾಗಾಗಿ ನಮಗೆ ಹೆಚ್ಚುವರಿ 53 ಕೋಟಿ ರೂ. ಬೇಕಾಗಲಿದ್ದು, ಅಧಿಕಾರಿಗಳು ಮತ್ತೊಂದು ಸುತ್ತಿನ ಸರ್ವೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿದರು.
ರನ್ ವೇ ವಿಸ್ತರಣೆ ಸಂಬಂಧ ರಾಜ್ಯ ಸರಕಾರ 319 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿದೆ. ಪ್ರಸ್ತುತ 150ಕೋಟಿ ಹಣವನ್ನೂ ಬಿಡುಗಡೆ ಮಾಡಿದೆ. ರನ್ ವೇ ವಿಸ್ತರಣೆ ಸಮಯದಲ್ಲಿ ಮೈಸೂರು- ನಂಜನಗೂಡು ಹೆzರಿಯನ್ನು ಡೈವರ್ಟ್ ಮಾಡಲಾಗುವುದು. ಶಿವಮೊಗ್ಗ ಏರ್‌ಪೋರ್ಟ್ ರನ್ ವೇ ಶೈಲಿ ಹಳೆಯದಾಯಿತು. ಹಾಗಾಗಿ ಹೊಸ ಮಾದರಿಯಲ್ಲಿ ರನ್ ವೇ ವಿಸ್ತರಣೆ ಮಾಡಲಾಗುವುದು. ಭೂಮಿ ಹಸ್ತಾಂತರ ಆಗುತ್ತಿದ್ದಂತೆ ಡಿಪಿಆರ್ ಸಿದ್ಧಮಾಡಲಾಗುವುದು. ರನ್ ವೇಗೆ ಮೂಕ್ಕಾಲು ಕಿ.ಮೀ. ಹೆಚ್ಚುವರಿ ಬೇಕಿರುವುದರಿಂದ ಸರ್ಕಾರಕ್ಕೆ ಶೀಘ್ರವೇ ಏರ್ ಪೋರ್ಟ್ ಪ್ರಾಧಿಕಾರ ಪತ್ರ ಬರೆಯಲಿದೆ ಎಂದು ತಿಳಿಸಿದರು.
ಅಂದುಕೊಂಡ ಕೆಲಸವನ್ನು ನಿಗದಿತ ಸಮಯದೊಳಗೆ ಮುಗಿಸಬೇಕು. ಭೂ ಮಾಲೀಕರಿಗೆ ಹಣ ವರ್ಗಾವಣೆ ಮಾಡಿ. ಸುಮ್ಮನೆ ಕಾಲಹರಣ ಮಾಡಲು ಸಭೆಗೆ ಬರಬೇಡಿ. ಜನರು ಕೆಲಸ ಮಾಡಲು ನಮ್ಮನ್ನು ಆರಿಸಿ ಕಳುಹಿಸಿದ್ದಾರೆ. ಹಾಗಾಗಿ ಸಮರ್ಪಕವಾಗಿ ಕಾರ್‍ಯ ನಿರ್ವಹಿಸಿ. ವಿಮಾನ ನಿಲ್ದಾಣ ಉನ್ನತೀಕರಣ ಸಂಬಂಧ ಸಾಕಷ್ಟು ಸಭೆ ನಡೆಸಿದರೂ ಕೆಲಸ ಮಾತ್ರ ನಡೆಯುತ್ತಿಲ್ಲ. ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಮೈಸೂರಿನಲ್ಲಿ ಇರಬೇಡಿ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಆರ್.ಮಂಜುನಾಥ್, ವಿಶೇಷ ಭೂ ಸ್ವಾಧೀನಾಧಿಕಾರಿ ಪ್ರಿಯದರ್ಶಿನಿ, ಅಭಿವೃದ್ಧಿ ಅಧಿಕಾರಿ ಮೂರ್ತಿ, ಸೆಸ್ಕ್ ಎಸಿ ನಾಗೇಶ್ ಸೇರಿದಂತೆ ಇತರರು ಇದ್ದರು.