ಮೈಸೂರು ವಿವಿ ಕುಲಪತಿ ಆಯ್ಕೆಗೆ ತಡೆಯಾಜ್ಞೆ

Spread the love

ಮೈಸೂರು ವಿವಿ ಕುಲಪತಿ ಆಯ್ಕೆಗೆ ತಡೆಯಾಜ್ಞೆ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ನೂತನ ಕುಲಪತಿ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಉಚ್ಛ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದ್ದರಿಂದ ನೂತನ ಕುಲಪತಿ ನೇಮಕ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವುದು ಖಚಿತವಾಗಿದೆ.

ಕಳೆದ ಎರಡು ದಿನಗಳ ಹಿಂದೆ ಮೈಸೂರು ವಿವಿ ಕುಲಪತಿ ಆಯ್ಕೆ ಸಂಬಂಧ ಶೋಧನಾ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಶೋಧನಾ ಸಮಿತಿ ಸಭೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಸ್.ಗುರು, ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಜಿ.ವೆಂಕಟೇಶ್ ಕುಮಾರ್, ಬೆಂಗಳೂರು ವಿಶ್ವವಿದ್ಯಾನಿಲಯದ ಡಾ.ಶರತ್ ಅನಂತಮೂರ್ತಿ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಕುಲಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ 71ಮಂದಿಯಲ್ಲಿ ಮೂವರ ಹೆಸರನ್ನು ಪರಿಗಣಿಸಿ ಉಳಿದವರ 68 ಅರ್ಜಿಯನ್ನು ತಿರಸ್ಕಾರ ಮಾಡಲಾಗಿತ್ತು. ಇದರಲ್ಲಿ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ರಾಜಶೇಖರ್ ಅವರ ಅರ್ಜಿಯನ್ನೂ ತಿರಸ್ಕರಿಸಲಾಗಿತ್ತು.

ತಿರಸ್ಕಾರ ಮಾಡುವಾಗ ತಮ್ಮ ವಿರುದ್ಧದ ಮೊಕದ್ದಮೆ ವಿಚಾರಣೆಯಲ್ಲಿ ಬಾಕಿ ಉಳಿದಿದೆ ಎನ್ನುವ ಅಂಶವನ್ನು ಗುರುತು ಮಾಡಿದ್ದರು. ಆದರೆ, ತಮ್ಮ ವಿರುದ್ಧ ಯಾವುದೇ ಪ್ರಕರಣ ಅಥವಾ ವಿಚಾರಣೆ ಇಲ್ಲವೆಂದು ಹೇಳಿ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ರಾಜಶೇಖರ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಮೈಸೂರು ವಿವಿ ಕುಲಪತಿ ನೇಮಕಾತಿಗೆ ಸಂಬಂಧಪಟ್ಟಂತೆ ತಡೆಯಾಜ್ಞೆ ನೀಡುವ ಜತೆಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೂ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.

ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸುವವರೆಗೆ ವಿಳಂಬವಾಗುವ ಸಂಭವವಿದೆ. ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡು ದಾಖಲೆ ಸಲ್ಲಿಸುವ ತನಕ ಪೂರ್ಣಾವಧಿ ಕುಲಪತಿ ನೇಮಿಸುವುದಕ್ಕೆ ಅಡ್ಡಿಯಾಗಲಿದೆ.


Spread the love