
ಮೈಸೂರು ವಿವಿ ಶಿಕ್ಷಣ ಮಂಡಳಿ ಸಭೆಯಲ್ಲಿ ಅಸಮಾಧಾನ!
ಮೈಸೂರು: ವಿಶ್ವವಿದ್ಯಾಲಯ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್)ಗೆ ನ್ಯಾಕ್ ಪ್ರಶಂಸೆ ವ್ಯಕ್ತಪಡಿಸಿದ್ದರೂ ಕೆಲವರು ಕೆ-ಸೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದರೂ ಮೈಸೂರು ವಿವಿ ಏಕೆ ಮೌನವಹಿಸಿದೆ ಎಂದು ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ ಸಭೆಯಲ್ಲಿ ಅಸಮಧಾನ ವ್ಯಕ್ತವಾಯಿತು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯ ಶೈಕ್ಷಣಿಕ ಮಂಡಳಿ ಮೂರನೇ ಸಭೆಯಲ್ಲಿ ಸದಸ್ಯರು ಕೆ-ಸೆಟ್ ಪರೀಕ್ಷೆ ಅಕ್ರಮ ಆರೋಪ ಮತ್ತು ಪರೀಕ್ಷೆ ನಡೆಸುವ ಅಧಿಕಾರವನ್ನು ಕೆಇಎಗೆ ವರ್ಗಾಯಿಸಿರುವ ಬಗ್ಗೆ ಸದಸ್ಯರು ಪ್ರಶ್ನಿಸಿದರು. ಮೈಸೂರು ವಿವಿಗೆ ತನ್ನದೇ ಆದ ಇತಿಹಾಸ, ಹಿನ್ನೆಲೆ ಮತ್ತು ಘಟನೆ ಇದೆ. ಹಲವು ವರ್ಷಗಳಿಂದ ಕೆ-ಸೆಟ್ ಪರೀಕ್ಷೆಯನ್ನು ವಿಶ್ವವಿದ್ಯಾಲಯ ನಡೆಸುತ್ತಾ ಬರುತ್ತಿದೆ. ಆದರೆ, ಕೆಲವರು ಪರಿಕ್ಷೆ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಬಂದಾಕ್ಷಣ ಇತ್ತೀಚೆಗೆ ಸರ್ಕಾರ ಏಕಾಏಕಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕೆ-ಸೆಟ್ ಪರೀಕ್ಷೆ ನಡೆಸಲು ಆದೇಶಿಸಿರುವುದು ಮೈಸೂರು ವಿಶ್ವವಿದ್ಯಾಲಯದ ಘನತೆಗೆ ಕಪ್ಪುಚುಕ್ಕೆಯಾಗಿದೆ. ಇತ್ತೀಚೆಗೆ ವಿಶ್ವವಿದ್ಯಾಲಯಕ್ಕೆ ನ್ಯಾಕ್ ಭೆಟಿ ನೀಡಿದಾಗ ಕೆ-ಸೆಟ್ ವಿಭಾಗದ ಕಾರ್ಯವೈಖರಿ ಪರಿಶೀಲಿಸಿ ಶ್ಲಾಘನೆ ಮಾಡಿತ್ತು. ಹೀಗಿದ್ದರೂ ಆರೋಪ ಬಂದಾಕ್ಷಣ ಏಕೆ ವಿವಿ ಸ್ಪಷ್ಟನೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಕಲಾ ನಿಕಾಯದ ಡೀನ್ ಪ್ರೊ.ಮುಜಾಫರ್ ಅಸ್ಸಾದಿ, ಸರ್ಕಾರ ಈಗಾಗಲೇ ಆರೋಪ ಸಂಬಂಧ ಸಮಿತಿ ರಚನೆ ಮಾಡಿ, ತನಿಖೆಗೆ ಆದೇಶಿಸಿದೆ. ಜತೆಗೆ ಸಮಿತಿಯಲ್ಲಿರುವ ಸದಸ್ಯರು ಈ ಸಭೆಯಲ್ಲೂ ಇರುವುದರಿಂದ ಈ ಚರ್ಚೆ ಸಮಂಜಸವಲ್ಲ ಎಂದು ಸಲಹೆ ನೀಡಿದ ಬಳಿಕ ನಾಮನಿರ್ದೇಶಿತ ಸದಸ್ಯರು ಸಮಾಧಾನಗೊಂಡರು. ಈ ವೇಳೆ ಮಾತನಾಡಿದ ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್ ಮಾತನಾಡಿ, ಯುಜಿಸಿ ಕೆ-ಎಸ್ ಪರೀಕ್ಷೆ ನಡೆಸುವ ಅಧಿಕಾರವನ್ನು ಆಯಾಯ ರಾಜ್ಯ ಸರ್ಕಾರಗಳಿಗೆ ನೀಡಿದೆ. ಆರೋಪ ಕೇಳಿಬಂದ ಹಿನ್ನೆಲೆ ಕೆಇಎಗೆ ಪರೀಕ್ಷೆ ನಡೆಸುವ ಅಧಿಕಾರವನ್ನು ಕರ್ನಾಟಕ ರಾಜ್ಯ ಸರ್ಕಾರ ನೀಡಿದೆ ಎಂದು ವಿವರಿಸಿದರು.